

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ್ ವಿರುದ್ಧದ ಪೊಲೀಸ್ ತನಿಖೆ ಮತ್ತು ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ನಿಂಗಪ್ಪ ಜಿ.ಅಲಿಯಾಸ್ ನಿಂಗಪ್ಪ ಸಾವಂತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನಿಂಗಪ್ಪರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ ದಳವಾಯಿ ಅವರ ವಾದ ಪುರಸ್ಕರಿಸಿದ ಪೀಠವು ತನಿಖೆ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು. ಪ್ರತಿವಾದಿ ಲೋಕಾಯುಕ್ತ ನೋಟಿಸ್ ಜಾರಿಗೊಳಿಸಿ, ಜು.15ಕ್ಕೆ ವಿಚಾರಣೆ ಮುಂದೂಡಿತು.
ನಿಂಗಪ್ಪ ಅವರನ್ನು ಪೊಲೀಸರು 2025ರ ಮೇ 31ರಂದು ಹೊಸದುರ್ಗದಲ್ಲಿ ಬಂಧಿಸಿದ್ದರು.
ದಾಖಲೆಗಳಲ್ಲಿ ಬಂಧನವನ್ನು 2025ರ ಜೂ.2ರಂದು ಬೆಂಗಳೂರಿನ ರಾಜಾಜಿನಗರದ ಮಾರುತಿ ಮೈದಾನದಲ್ಲಿ ಎಂದು ತೋರಿಸಲಾಗಿದೆ. ಇದು ಅಕ್ರಮವಾಗಿದ್ದು, ಪೊಲೀಸರು ಬಂಧನಕ್ಕೂ ಮುನ್ನ ಆರೋಪಿಗೆ ನೀಡಬೇಕಾದ ಬಂಧನ ಆಧಾರಗಳನ್ನು ಒದಗಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.