ವಿಚ್ಛೇದಿತ ಪತಿಯನ್ನೇ ಅವಲಂಬಿಸುವ ಬದಲು ದುಡಿಯುವಂತಾಗಬೇಕು: ಮಹಿಳೆಗೆ ಬುದ್ಧಿ ಹೇಳಿದ ಹೈಕೋರ್ಟ್

highcourt
Published on

ಬೆಂಗಳೂರು:  ಉತ್ತಮ ಶಿಕ್ಷಣ ಹೊಂದಿದ್ದರು ಉದ್ಯೋಗ ಪಡೆಯದೆ ವಿಚ್ಛೇದಿತ ಪತ್ನಿ ಶಾಶ್ವತವಾಗಿ ಗಂಡನ ಮೇಲೆ ಅವಲಂಬಿತಳಾಗುವುದು ಒಪ್ಪುವಂತದ್ದಲ್ಲ ಎಂದಿರುವ ಹೈಕೋರ್ಟ್, ಮುಂದಿನ 6 ತಿಂಗಳಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಪ್ರಕರಣವೊಂದರಲ್ಲಿ ವಿಚ್ಛೇದಿತ ಪತ್ನಿಗೆ ಸಲಹೆ ನೀಡಿದೆ.

ದೂರುದಾರೆ ಪತ್ನಿ ಉನ್ನತಮಟ್ಟದ ಶಿಕ್ಷಣ ಪಡೆದಿದ್ದರೂ ಒತ್ತಡ ನೆಪವೊಡ್ಡಿ ಕೆಲಸಕ್ಕೆ ತೆರಳದೆ ಈ ರೀತಿ ಪತಿಯಿಂದ ಜೀವನಾಂಶಕ್ಕಾಗಿ ಆಕ್ಷೇಪಡುವುದು ಸಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಚ್ಚೇದನದ ಬಳಿಕ ಮಾಸಿಕ 20 ಸಾವಿರ ರು.ಗಳ ಜೀವನಾಂಶ ನೀಡಲು ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟ್ಟಿ ಅವರಿದ್ದ ನ್ಯಾಯಪೀಠ ಈ ಮೇಲಿನಂತೆ ಹೇಳಿದೆ.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರತಿವಾದಿಯಾಗಿರುವ ಪತ್ನಿ ಜೈವಿಕ ತಂತ್ರಜ್ಞಾನದಲ್ಲಿ ಎಂ.ಟೆಕ್ ಪದವೀಧರೆಯಾಗಿದ್ದು, ಉದ್ಯೋಗ ಪಡೆಯುವುದಕ್ಕೆ ಅರ್ಹರಾಗಿದ್ದಾರೆ. ವಿವಾಹಕ್ಕೂ ಮುನ್ನ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ವಿಚ್ಛೇದನದ ಬಳಿಕ ಮಾನಸಿಕ ಒತ್ತಡದಿಂದ ಉದ್ಯೋಗ ಪಡೆಯಲು ಪ್ರಯತ್ನ ಮಾಡಿಲ್ಲ ಎಂಬ ಅಂಶ ದಾಖಲೆಗಳ ಮೂಲಕ ತಿಳಿದು ಬಂದಿದೆ. ಉದ್ಯೋಗ ಪಡೆದು ದುಡಿಯಲು ಅರ್ಹರಿದ್ದರೂ ಮನೆಯಲ್ಲಿ ಕುಳಿತು ಪತಿಯನ್ನು ಅವಲಂಬಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಜತೆಗೆ, ವಿಚಾರಣಾ ನ್ಯಾಯಾಲಯದ ಆದೇಶ ಮಾರ್ಪಡಿಸಿರುವ ನ್ಯಾಯಪೀಠ, ಮುಂದಿನ ಆರು ತಿಂಗಳಲ್ಲಿ ಪತ್ನಿ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಅಲ್ಲಿಯವರೆಗೂ ಮಾಸಿಕ 10 ಸಾವಿರ ರೂಗಳನ್ನು ಪತಿ ಪಾವತಿಸಬೇಕು ಎಂದು ಸೂಚನೆ ನೀಡಿದೆ.

ಅಲ್ಲದೆ, ಆರು ತಿಂಗಳ ಬಳಿಕ (ಪತ್ನಿಗೆ ಕೆಲಸ ಸಿಕ್ಕ ನಂತರ) 10 ಸಾವಿರ ರೂಪಾಯಿ ಪಾವತಿಸಲು ನಿರ್ದೇಶನ ನೀಡಿರುವ ಆದೇಶವನ್ನು ಮರು ಪರಿಶೀಲನೆ ನಡೆಸಲು ಕೌಟುಂಬಿಕ ನ್ಯಾಯಾಲಯಕ್ಕೆ ಪತಿ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿರುತ್ತಾರೆ. ಪತ್ನಿಯು ಉದ್ಯೋಗಕ್ಕಾಗಿ ಪ್ರಯತ್ನ ಮಾಡಿರುವ ಸಂಬಂಧ ಅಗತ್ಯ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net