

ಬೆಂಗಳೂರು: ಕ್ಷೇತ್ರಕ್ಕೆ ವಿಶೇಷ ಅನುದಾನ ಕೊಡುತ್ತಿಲ್ಲ, ನಾವು ಹೇಳಿದವರಿಗೆ ವರ್ಗಾವಣೆ ಮಾಡುತ್ತಿಲ್ಲ, ಸಚಿವರು ನಮ್ಮನ್ನು ಗೌರವದಿಂದ ಕಾಣುತ್ತಿಲ್ಲ ಎಂದು ಸಹಿ ಸಂಗ್ರಹ ಮಾಡಿದ್ದ ಶಾಸಕರ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ದೆಹಲಿಯಲ್ಲಿ ಬುಧವಾರ ನಡೆದ ಲೋಕಸಭೆ ಚುನಾವಣೆ ತಯಾರಿ ಮತ್ತು ಸರ್ಕಾರದ ಪರಾಮರ್ಶನ ಸಭೆಯಲ್ಲಿ ಶಾಸಕರ ಅಸಮಾಧಾನ ವಿಚಾರ ಪರೋಕ್ಷವಾಗಿ ಪ್ರಸ್ತಾಪವಾಗಿದೆ.
ಸಭೆಯಲ್ಲಿ ಯಾವುದೇ ಹೆಸರನ್ನು ಪ್ರಸ್ತಾಪ ಮಾಡದೇ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜ್ಯ ನಾಯಕರನ್ನು ಎಚ್ಚರಿಸಿದ್ದಾರೆ. ಯಾವ ಶಾಸಕರು ಅಥವಾ ಸಚಿವರೂ ಸಹ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಬಾರದು. ಪಕ್ಷಕ್ಕೆ ವಿರುದ್ಧವಾಗಿರೋ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ಪಕ್ಷದಲ್ಲಿನ ಹಿರಿಯರೇ ಆಗಲಿ, ಕಿರಿಯರೇ ಆಗಲಿ ಯಾರು ಮನಬಂದಂತೆ ಮಾತನಾಡಬಾರದು ಎಂದು ತಾಕೀತು ಮಾಡಿದರು.
ಮಾಧ್ಯಮಗಳ ಮುಂದೆ ನೀಡುವ ಹೇಳಿಕೆಯಿಂದ ಪಕ್ಷದಲ್ಲಿ ಮತ್ತಷ್ಟು ಗೊಂದಲ ಮೂಡುವ ಸಾಧ್ಯತೆ ಹೆಚ್ಚಾಗುತ್ತದೆ. ಯಾವುದೇ ವಿಚಾರ, ಬೇಸರ, ಅಸಮಾಧಾನ ಇದ್ದರೆ ಪಕ್ಷದ ಒಳಗೆ ಮಾತನಾಡುವ ಅಭ್ಯಾಸ ಒಳ್ಳೆಯದು. ಮಾಧ್ಯಮಗಳ ಮುಂದೆ ಹೆಚ್ಚು ಎಕ್ಸ್‌ಪೋಸ್ ಆಗುವ ಅವಶ್ಯಕತೆ ಇಲ್ಲ. ಅಲ್ಲಿ ಹೋಗುವುದರಿಂದಲೇ ಪರಿಹಾರ ಸಿಗುವುದಿಲ್ಲ ಎಂದು ಸಹಿ ಸಂಗ್ರಹ ಮಾಡಿದ ಶಾಸಕರಿಗೆ ಎಚ್ಚರಿಸಿದ್ದಾರೆ.