ನ್ಯಾ.ದೇಸಾಯಿ ಡಿಬಾರ್ ಆದೇಶಕ್ಕೆ ಹೈ ತಡೆ

Published on

 ಬೆಂಗಳೂರು:  ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕೇಂದ್ರ ಸರ್ಕಾರವು ಮೂರು ವರ್ಷ ಸರ್ಕಾರದ ಎಲ್ಲ ನೇಮಕಾತಿಗಳಿಂದ ಡಿಬಾರ್ ಮಾಡಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕೇಂದ್ರದ ಆದೇಶ ಪ್ರಶ್ನಿಸಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಉದಯ್ ಹೊಳ್ಳ ವಾದ ಮಂಡಿಸಿ ಪಿ.ಎನ್. ದೇಸಾಯಿ ಅವರನ್ನು ಕೇಂದ್ರ ಸರ್ಕಾರದ ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿತ್ತು.

ಆದರೆ ತಾವು ಈಗಾಗಲೇ ರಾಜ್ಯ ಸರ್ಕಾರದ ನ್ಯಾಯಾಂಗ ತನಿಖೆ ಹೊಣೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಎಟಿ ಸದಸ್ಯ ಸ್ಥಾನ ವಹಿಸಿಕೊಳ್ಳಲು ಸ್ವಲ್ಪ ಸಮಯ ನೀಡಬೇಕೆಂದು ಅವರು ಮನವಿ ಮಾಡಿದ್ದರು. ಆದರೆ ಆ ಮನವಿ ಪರಿಗಣಿಸದೆ ಕೇಂದ್ರ ಸರ್ಕಾರ ಏಕಾಏಕಿ ಡಿಬಾರ್ ಮಾಡಿದೆ.

ಅಲ್ಲದೆ, 2009ರ ಕಚೇರಿ ಜ್ಞಾಪನಾ ಪತ್ರದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಯ ಹೆಸರನ್ನು ಭಾರತ ಸರ್ಕಾರದ ನೇಮಕಾತಿ ಸಚಿವಾಲಯಕ್ಕೆ ಕಳುಹಿಸುವ ಮುನ್ನ ಆ ಅಭ್ಯರ್ಥಿಯ ಅನುಮತಿ ಪಡೆಯಬೇಕಿತ್ತು, ಆದರೆ ಪಡೆದಿಲ್ಲ. ಜತೆಗೆ ಆಯ್ಕೆಯಾದ ಅಭ್ಯರ್ಥಿ 30 ದಿನಗಳಲ್ಲಿ ಹುದ್ದೆ ವಹಿಸಿಕೊಳ್ಳದಿದ್ದರೆ ಅಂತಹ ಸಂದರ್ಭಗಳಲ್ಲಿ 15 ದಿನಗಳ ನೋಟಿಸ್ ನೋಡಿ ಹುದ್ದೆ ವಹಿಸಿಕೊಳ್ಳಲು ಸೂಚನೆ ನೀಡಬೇಕು, ಆದರೆ ನೋಟಿಸ್ ನೀಡದೆ ಡಿಬಾರ್ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ವಿಧಿಸಿದ್ದು,, ಪ್ರತಿವಾದಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net