ಸಂತ್ರಸ್ತೆ ಮದುವೆಯಾಗಲು ಆರೋಪಿಗೆ ‘ಹೈ ’ ಜಾಮೀನು

highcourt
Published on

ಬೆಂಗಳೂರು: ಮಗು ಮತ್ತು ಸಂತ್ರಸ್ತೆಯ ಹಿತರಕ್ಷಣೆ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ಆರೋಪಿಗೆ ಸಂತ್ರಸ್ತೆಯನ್ನೇ ಮದುವೆಯಾಗುವ ಸಲುವಾಗಿ ಮಧ್ಯಂತರ ಜಾಮೀನು ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕೋರಿ ಮೈಸೂರು ಮೂಲದ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಂತ್ರಸ್ತೆಯನ್ನು ಮದುವೆಯಾಗುವ ನಿಟ್ಟಿನಲ್ಲಿ ಜೂ.17ರಿಂದ ಅನ್ವಯವಾಗುವಂತೆ ಜು. 3ರವರೆಗೆ ಮಧ್ಯಂತರ ಜಾಮೀನು ಮೇಲೆ ಬಿಡುಗಡೆಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಯ ಹಾಗೂ ಸಂತ್ರಸ್ತೆ ಲೈಂಗಿಕ ಸಂಪರ್ಕದಿಂದ ಮಗು ಜನಿಸಿದೆ. ಆಕೆ ಈಗ 18 ವರ್ಷ ವಯಸ್ಸು. ಈ ಹಿಂದೆ ಏನೆಲ್ಲ ಘಟನೆಗಳು ನಡೆದಿವೆ ಎನ್ನುವುದರ ಕುರಿತು ಮಗುವಿಗೆ ಅರಿವಿಲ್ಲ. ಇಲ್ಲಿ ಮಗು ಮತ್ತು ಸಂತ್ರಸ್ತೆಯ ಹಿತರಕ್ಷಣೆ ಮುಖ್ಯ. ಮಗು ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ಅವಮಾನಕ್ಕೆ ಗುರಿಯಾಗಬಾರದು ಎಂದು ಭಾವಿಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.

ಮುಂದುವರಿದು, ಸಂತ್ರಸ್ತೆಯನ್ನು ಮದುವೆಯಾಗಿ ಜು.3ರ ಸಂಜೆ ಹಿಂದಿರುಗಬೇಕು. ಜು.4ರಂದು ವಿವಾಹ ನೋಂದಣಿ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಬೇಕು. ಜಾಮೀನು ಮೇಲೆ ಹೊರಗಿರುವ ಸಮಯದಲ್ಲಿ ಆರೋಪಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಾರಕ್ಕೊಮ್ಮೆ ಹಾಜರಾಗಬೇಕು ಸೂಚನೆ ನೀಡಿ, ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ.

ರಾಜೀ ಸಂಧಾನ ಪರಿಗಣಿಸಿ

ವಿಚಾರಣೆ ವೇಳೆ, ಆರೋಪಿ ಮತ್ತು ಸಂತ್ರಸ್ತೆಯ ಪರ ವಕೀಲರು, ‘ಅರ್ಜಿದಾರರು ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಮಧ್ಯೆ ಪಾಲಕರು ಬಂದಿದ್ದಾರೆ. ಒಮ್ಮತದ ಲೈಂಗಿಕ ಸಂಪರ್ಕದಿಂದ ಅವರಿಗೆ ಮಗು ಜನಿಸಿದ್ದು, ಅದಕ್ಕೆ ಸದ್ಯ ಒಂದು ವರ್ಷ ವಯಸ್ಸಾಗಿದೆ. ಆರೋಪಿ ಬಂಧನಕ್ಕೆ ಒಳಗಾಗುವ ದಿನಕ್ಕೆ ಸಂತ್ರಸ್ತೆಗೆ 18 ವರ್ಷ ತುಂಬಿರಲಿಲ್ಲ. ಆದರೆ, ಈಗ ಆಕೆಗೆ 18 ವರ್ಷ ವಯಸ್ಸಾಗಿದೆ. ಈಗ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕೆ ಪಾಲಕರ ಸಮ್ಮತಿ ಇದೆ. ಹೀಗಾಗಿ ಈ ರಾಜೀ ಸಂಧಾನ ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆರೋಪಿಯೇ ಮಗುವಿನ ಜೈವಿಕ ತಂದೆ

ಅರ್ಜಿದಾರರ ಮನವಿ ಪರಿಗಣಿಸಿದ ನ್ಯಾಯಪೀಠ, ಆರೋಪಿ ಮತ್ತು ಸಂತ್ರಸ್ತೆಯೇ ಮಗುವಿನ ಜೈವಿಕ ತಂದೆ-ತಾಯಿ ಎಂಬುದು ಮಗುವಿನ ಡಿಎನ್‌ಎ ವರದಿ ಸ್ಪಷ್ಟಪಡಿಸುತ್ತದೆ. ಮಗುವಿಗೆ ಸಂತ್ರಸ್ತೆ ತಾಯಿ ಪೋಷಣೆ ಬೇಕಿದೆ. ಅದರ ರಕ್ಷಣೆ ಮುಖ್ಯ. ಸಂತ್ರಸ್ತೆಯನ್ನು ಮದುವೆಯಾಗಲು ಆರೋಪಿಗೆ ಅನುಮತಿ ನೀಡುವ ಮೂಲಕ ಅವರಿಬ್ಬರ ಕುಟುಂಬಗಳ ನಡುವಿನ ಕಷ್ಟ ಪರಿಹರಿಸುವುದು ಸೂಕ್ತವಾಗಿದೆ ಎಂದು ಮಧ್ಯಂತರ ಜಾಮೀನು ನೀಡುವ ವೇಳೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net