

ಬೆಂಗಳೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಯಲ್ಲೇ, ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳ ಅಡಿಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿ ಸೋಮವಾರ ಬೆಳಗಾವಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯಕ್ಕೆ ಶಂಕುಸ್ಥಾಪನೆ(Hidkal Dam; Sub Regional Science Center Foundation Laying) ನೆರವೇರಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು(N.S.Bosaraju) ತಿಳಿಸಿದ್ದಾರೆ.
ಒಟ್ಟು 13 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜಾಲಖಮಗೌಡ ಉದ್ಯಾನಕಾಶಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯದ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ನೀರಾವರಿ ನಿಗಮದಿಂದ ರಾಜಾಲಖಮಗೌಡ ಉದ್ಯಾನಕಾಶಿ ಅಭಿವೃದ್ಧಿ ಯೋಜನೆಯಡಿ 5 ಎಕರೆ ಜಮೀನನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸೊಸೈಟಿಗೆ ಕಾಮಗಾರಿ ಕೈಗೊಳ್ಳಲು ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಸಮಪಾಲಿನಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಒಂದು ಫನ್ ಸೈನ್ಸ್ ಗ್ಯಾಲರಿ ಹಾಗೂ ಎರಡು ಥೀಮ್ಯಾಟಿಕ್ ಸೈನ್ಸ್ ಗ್ಯಾಲರಿಯನ್ನು ಹೊಂದಿರಲಿದೆ. ಇದಲ್ಲದೇ 150 ಜನರು ಒಟ್ಟಿಗೆ ಕುಳಿತುಕೊಳ್ಳಬಹುದಾದ ಆಡಿಟೋರಿಯಮ್ ಕೂಡಾ ನಿರ್ಮಾಣವಾಗಲಿದೆ. ಕಂಪ್ಯೂಟರ್ ರೂಂ ಕೂಡಾ ಇರಲಿದ್ದು ವಿದ್ಯಾರ್ಥಿಗಳು ಹೊಸತನ್ನು ಕಲಿಯಲು ಅನುವು ಮಾಡಿಕೊಡಲಿದೆ. ಮಿನಿ ತಾರಾಲಯ 10 ಮೀಟರ್ ಡೋಮ್ ಹೊಂದಿರಲಿದ್ದು ಒಟ್ಟಿಗೆ 60 ಜನರು ಕುಳಿತು ಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ. 2 ಅಥವಾ 3ಡಿ ಪ್ರೊಜೆಕ್ಟರ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿಯನ್ನು 7 ಕೋಟಿ ರೂ.ಗಳಲ್ಲಿ ಕೈಗೊಳ್ಳಲು ಹಾಗೂ ಮಿನಿ 3ಡಿ ತಾರಾಲಯದ ಕಟ್ಟಡ ಕಾಮಗಾರಿಯನ್ನು 3.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿರುತ್ತಾರೆ. ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.