

ಬೆಂಗಳೂರು: ನಾವು ಕಟ್ಟಿಸಿರುವ ಮನೆ ಅದೆಷ್ಟೇ ಸೊಗಸಾಗಿದ್ದರೂ ಅದಕ್ಕೊಂದು ಒಳ್ಳೆಯ ಗೆಟಪ್ ಬರಬೇಕೆಂದರೆ ಮನೆಯ ಮುಂದೆ ಹೂತೋಟ ಇರಲೇಬೇಕು. ಆಗಲೆ ಅದಕ್ಕೊಂದು ಮೆರುಗು. ಹೂತೋಟ ಮಾಡಬೇಕೆನ್ನುವವರು ಈಗ ಹೆಚ್ಚು ರಿಸ್ಕ್ ಇಲ್ಲದೆ ಸುಲಭವಾಗಿ ಬೆಳೆಯಬಹುದಾದ ಹೂಗಳನ್ನು ಇಷ್ಟಪಡುತ್ತಾರೆ. ಹಾಗೇ ಹೆಚ್ಚು ಆರೈಕೆ ಇಲ್ಲದೆ ಸುಲಭವಾಗಿ ಬೆಳೆಯಬಹುದಾದ ಗಿಡವೆಂದರೆ ದಾಸವಾಳ.
ಎಲ್ಲಾ ಸೀಸನ್‌ನಲ್ಲಿ ಅರಳುವ ದಾಸವಾಳಕ್ಕೆ 3 ದಿನಕ್ಕೆ ಒಮ್ಮೆ ನೀರು ಹಾಕಿ, ಆಗಾಗ ಗೊಬ್ಬರ ಕೊಟ್ಟರೆ ಸಾಕು ವರ್ಷಪೂರ್ತಿ ನಳನಳಿಸುತ್ತಿರುತ್ತದೆ. ದಾಸವಾಳದಲ್ಲಿ ಅನೇಕ ತಳಿಗಳಿವೆ. ಅದರಲ್ಲಿ ಕೈಗೆಟುಕಬಹುದಾದದ್ದು ಚೈನೀಸ್, ಚೆಕ್ರೆಡ್, ಸಬ್‌ಡಾರ್ಫಿಯಾ, ಹವೈನ್, ಕ್ಯಾನ್‌ಬೈನಸ್, ಪಿಂಕ್, ಕೆಂಪು, ಕಡು ಹಳದಿ ಬಣ್ಣದ ದಾಸವಾಳಗಳು.
ಚೈನೀಸ್ ದಾಸವಾಳ ಪಿಂಕ್ ಮಿಶ್ರಿತ ಕೆಂಪು ಬಣ್ಣದಲ್ಲಿದ್ದು ಭಾರತದ ಯಾವ ಮೂಲೆಯಲ್ಲಾದರೂ ಬೆಳೆಯುತ್ತದೆ. ಚೆಕ್ರೆಡ್ ಪಿಂಕ್-ಬಿಳಿ, ರೆಡ್-ಕ್ರೀಮ್, ಬಿಳಿ-ಕ್ರೀಮ್ ಹೀಗೆ ಮಿಶ್ರಿತ ಬಣ್ಣದಲ್ಲಿ ಲಭ್ಯ. ಹವೈನ್ ಒಂದು ದಿನ ಕಳೆದರೂ ಬಾಡಿ ಹೋಗುವುದಿಲ್ಲ. ಇದು ಸಹ ವಿವಿಧ ಬಣ್ಣಗಳಲ್ಲಿ ದೊರಕುತ್ತದೆ. ಬಿಳಿ ದಾಸವಾಳ ಆರೋಗ್ಯಕ್ಕೆ ಅಷ್ಟೇ ಅಲ್ಲ ನೋಡುವುದಕ್ಕೂ ಅಷ್ಟೇ ಚೆಂದ. ಈ ಹೂವಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಒಂದು ದಿನ ಮಿಸ್ ಮಾಡದೆ ವರ್ಷ ಪೂರ್ತಿ ಬಿಡುವ ದಾಸವಾಳ ಸಬ್‌ಡಾರ್ಫಿಯಾ. ತೆಳು ಹಳದಿ ಬಣ್ಣದ ಮಧ್ಯೆ ಕೆಂಪು ಬಣ್ಣ ಬಂದಿರುವುದರಿಂದ ನೋಡಲು ಬಹಳ ಸುಂದರ.
ಸಾಮಾನ್ಯವಾಗಿ ಎಲ್ಲರೂ ಬೆಳೆಯುವ ಕೆಂಪು ದಾಸವಾಳ ಗಿಡದ ತುಂಬಾ ಹೂ ಬಿಡುತ್ತದೆ. ಬೇಲಿಯ ಹತ್ತಿರ, ಗಾರ್ಡನ್ ಮೂಲೆಯಲ್ಲಿ ನೆಟ್ಟರೆ ಆಕರ್ಷಕವಾಗಿರುತ್ತದೆ. ಪಿಂಕ್ ದಾಸವಾಳ ಎತ್ತರ ಕಡಿಮೆ. ಆದರೆ ಹೂಗಳ ಮಧ್ಯೆ ಇದನ್ನು ನೆಟ್ಟರೆ ನೋಡಲು ಚೆನ್ನ. ಟ್ರೈನಂ ಮೂರು ಬಣ್ಣದಲ್ಲಿ ಸಿಗುತ್ತದೆ. ಮನೆಯ ಸೊಬಗನ್ನು ಹೆಚ್ಚಿಸುವುದರಲ್ಲಿ ಇದರ ಪಾತ್ರ ಅನನ್ಯ. ಕ್ಯಾನ್‌ಬೈನಸ್ ಅನ್ನು ಹೂವಿನ ಕುಂಡದಲ್ಲಿ ಬೆಳೆಸಬಹುದು. ಕಡು ಹಳದಿ ಬಣ್ಣದ ದಾಸವಾಳ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಲರ್‌ಫುಲ್ ಆಗಿರುವ ಈ ದಾಸವಾಳಗಳು ಮನೆಯನ್ನು ಅತ್ಯಾಕರ್ಷಕವಾಗಿ ಇಡುವುದಲ್ಲದೇ ನೋಡುಗರ ಕಣ್ಮನ ಸೆಳೆಯುವುದಂತು ಸುಳ್ಳಲ್ಲ.