

ಬೆಂಗಳೂರು: ‘ಅವರು ಹಾಯ್ ಅಂದ್ರೆ ನಾವು ಬೈ ಬೈ ಅಂತ ಓಡಿಹೋಗಬೇಕು’(Hi means bye bye and I have to run away) ಎಂದು ಹನಿಟ್ರ್ಯಾಪ್ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಎಚ್ಚರಿಕೆಯ ಮಾತನ್ನಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಹನಿಟ್ರ್ಯಾಪ್ ಯತ್ನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ನಾವೇ ಎಲ್ಲರಿಂದ ಎಚ್ಚರವಾಗಿರಬೇಕಷ್ಟೇ. ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕು. ಅವರು ಹಾಯ್ ಅಂದ್ರೆ ನಾವು ಹಾಯ್ ಅನ್ನಬಾರದು. ಹಾಯ್ ಅಂದ್ರೆ ಬೈ ಬೈ ಅಂತ ಓಡಿಹೋಗಬೇಕಷ್ಟೇ. ರಾಜಣ್ಣ ಹಾಯ್ ಅಂದವರಿಗೆ ಬೈ ಬೈ ಅಂದಿದ್ದಾರಂತೆ. ನಾವೆಲ್ಲರೂ ಹಾಗೇ ಇರಬೇಕು. ಹಾಯ್ ಅಂದ್ರೆ ಹಾಯ್ ಅನ್ನಬಾರದು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಹನಿ ಟ್ರ್ಯಾಪ್ ವಿಚಾರದಲ್ಲಿ ಯಾರು ಶತ್ರುಗಳು, ಯಾರು ಮಿತ್ರರು ಎಂಬುದು ಗೊತ್ತಾಗುವುದಿಲ್ಲ. 300 ಕಿ.ಮೀ. ರೇಡಿಯಸ್‌ನಲ್ಲಿ ಏನು ಬೇಕಾದರೂ ಆಗಬಹುದು. ನಾವು, ನೀವು, ಶಾಸಕರು ಎಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ ಎಂದು ಹೇಳಿದ್ದಾರೆ.
ಕೊಡಗು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕುರಿತ ಪ್ರಶ್ನೆಗೆ, ಪೊಲೀಸರು ತನಿಖೆ ಮಾಡಲಿ. ಆತ್ಮಹತ್ಯೆ ಕೇಸ್ ಅಂದಾಗ ಸಹಜವಾಗಿಯೇ ಪೊಲೀಸರು ತನಿಖೆ ಮಾಡುತ್ತಾರೆ. ಯಾರ ತಪ್ಪಿದೆ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ನಾವು ಇಲ್ಲಿದ್ದು ಹೀಗೇ ಆಗಿದೆ ಅಂತ ಹೇಗೆ ಹೇಳೋದು? ತನಿಖೆಯಾಗಿ ಸತ್ಯ ಹೊರ ಬರಲಿ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.