ಟಿಕೆಟ್‌ಗೆ ಹೈ ಒಪ್ಪಿದೆ, ಸಿಎಂ ಮನಸ್ಸು ಮಾಡಬೇಕಷ್ಟೇ; ಮುನಿಯಪ್ಪ ಅಸಹನೆ

minister Muniyappa
Published on
  1. ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಡೆದ ಘಟನೆಗಳಿಂದ ನನ್ನ ಮನಸ್ಸಿಗೆ ಆಘಾತವಾಗಿದೆ. ಅವರಿಗೂ ಬೇಡ ಇವರಿಗೂ ಬೇಡ ಎಂದರೆ ಅಭ್ಯರ್ಥಿಯ ಗೆಲುವು ಕಷ್ಟಕರವಾಗಲಿದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಗಂಭೀರ ದನಿ ಹೊರಹಾಕಿದ್ದಾರೆ. ಮುಖ್ಯಮಂತ್ರಿಯವರು ರಿಸಲ್ಟ್ ಓರಿಯಂಟೇಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಹಾಗೆಯೇ ರವಿ ಕಾಣದ್ದನ್ನು... ಕವಿ ಕಂಡ... ಎಂಬ ಮಾತಿನಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಕ್ಕಟ್ಟಿನ ಹಿಂದೆ ಯಾರಿದ್ದಾರೆ ಎಂಬುದನ್ನು ಮಾಧ್ಯಮದವರೇ ಹುಡುಕಬೇಕು ಎಂದೂ ಸಹ ಹೇಳಿದ್ದಾರೆ. ಬಿಕ್ಕಟ್ಟಿನ ಹಿಂದೆ ಕೆಲಸ ಮಾಡುತ್ತಿರುವವರನ್ನು ಮಾಧ್ಯಮಗಳು ಬಹಿರಂಗಪಡಿಸಬೇಕೆಂದು ಅವರು ಬಹಿರಂಗವಾಗಿ ಕೋರುವ ಮೂಲಕ ತಮ್ಮ ಕುಟುಂಬಕ್ಕೆ ಅವಕಾಶ ತಪ್ಪಿಸುವ ಪ್ರಯತ್ನದ ಹಿಂದೆ ದೊಡ್ಡ ಕೈ ಇದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ರಾಜ್ಯದಲ್ಲಿನ ಬಿಕ್ಕಟ್ಟು ಪರಿಹರಿಸುವ ನಾಯಕರು ಕೋಲಾರದ ಬಿಕ್ಕಟ್ಟು ನಿವಾರಿಸುವಲ್ಲಿ ಯಾಕೆ ಪ್ರಯತ್ನ ಮಾಡಬಾರದು? ಬಗೆ ಹರಿಸುವವರು ದೊಡ್ಡ ಮನಸ್ಸು ಮಾಡಬೇಕು ಎಂದು ಹೇಳುವ ಮೂಲಕ ಸಿಎಂ, ಡಿಸಿಎಂ ಕುರಿತೂ ಸಹ ತಮ್ಮ ಅಸಹನೆ ಹೊರಹಾಕಿದರು. ನಾನು ಕೇಂದ್ರದಲ್ಲಿ 40 ವರ್ಷಗಳ ಕಾಲ ರಾಜಕೀಯ ಮಾಡಿರುವವನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನನಗೆ ತವರು ಮನೆ ಇದ್ದಂತೆ ನಾನು ಮಾತು ಕೊಟ್ಟಿದ್ದೇನೆ ಎರಡು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೇನೆ. ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಇದರಲ್ಲಿ ರಮೇಶ್ ಕುಮಾರ್ ಪಾತ್ರ ಬಹಳ ಮುಖ್ಯವಾಗಿದೆ ಅವರ ಅಭಿಪ್ರಾಯ ಪಡೆಯುವುದು ಸೂಕ್ತ ಎಂದರು. ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ. ಪಕ್ಷ ನಮಗೆ ದೊಡ್ಡದು ನನಗೆ ಎಲ್ಲಾ ಅಧಿಕಾರ ಕಲ್ಪಿಸಿದ್ದು, ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ ಅವರು ಎಐಸಿಸಿ ಅಧ್ಯಕ್ಷರಾದಿಯಾಗಿ ಎಲ್ಲರೂ ನನಗೆ ಸಮ್ಮತಿ ಸೂಚಿಸಿದ್ದು ಮುಖ್ಯಮಂತ್ರಿ ಯವರ ನಿರ್ಧಾರ ಮುಖ್ಯ. ರಿಸಲ್ಟ್ ಓರಿಯಂಟೆಡ್ ಅಭ್ಯರ್ಥಿಯನ್ನು ಆರಿಸಬೇಕು. ಇಗಲೂ ಕಾಲ ಮಿಂಚಿಲ್ಲಾ ನಮಗೆ ಟಿಕೆಟ್ ನೀಡಿದರೆ ನಾವೆಲ್ಲಾ ಗೆಲ್ಲಿಸಿ ಕೊಂಡು ಬರುತ್ತೇವೆ ಎಂದು ಹೇಳಿದರು. ಶ್ರೀನಿವಾಸಪುರದ ಮಾಜಿ ಶಾಸಕ, ಮಾಜಿ ಸಚಿವ ರಮೇಶ್ ಕುಮಾರ್ ಅವರ ಮನೆಗೆ ನಾನೇ ಖುದ್ದಾಗಿ ಭೇಟಿ ನೀಡಿದ್ದು ಅವರು ಅನಾರೋಗ್ಯದ ಕಾರಣ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ನಾನು ಯಾವ ನಾಯಕರ ವಿರುದ್ಧವೂ ಕೆಲಸ ಮಾಡಿಲ್ಲ, ಸಚಿವಗಿರಿಗೆ ವಿರೋಧಿಸಿಲ್ಲ. ಶಾಸಕರಾಗಲು ಸಹ ಸಹಕರಿಸಿದ್ದೇನೆ ಎಂದು ತಮ್ಮ ಮೇಲಿನ ಟೀಕೆಗೆ ಪ್ರತಿಕ್ರಿಯೆ ನೀಡಿದರು. ಹೈಕಮಾಂಡ್ ಇದೆಲ್ಲವನ್ನೂ ಗಮನಿಸುತ್ತಿದೆ. ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾಗಿ ಪಕ್ಷವನ್ನು ಕಟ್ಟುತ್ತಿದ್ದೇನೆ. ನಮಗೆಲ್ಲ ತಾಯಿ ಸಮಾನವಾಗಿ ಪಕ್ಷ ಇರುವುದರಿಂದ ನಾವು ಒಗ್ಗಟ್ಟಾಗಿ ಹೋಗೋಣ ಎಂದು ಮನದಿಂಗಿತ ಹೊರಹಾಕಿದರು.

    ಐದು ಕಾರಣ

    1. ಸುಖಾಸುಮ್ಮನೆ ಯಾರೋ ಅಭ್ಯರ್ಥಿ ಎಂದು ಘೋಷಿಸಬಾರದು. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ.

    2. ಅವಕಾಶ ನೀಡಬೇಕು ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೇನೆ. ಇನ್ನೂಕಾಲ ಮಿಂಚಿಲ್ಲ ಯೋಚನೆ ಮಾಡಲಿ.

    3. ಈ ಬಾರಿ ನಾವು ಕೋಲಾರದಲ್ಲಿ ಜಯಗಳಿಸಬೇಕಾಗಿರುವುದರಿಂದ ನಮ್ಮ ಕುಟುಂಬದ ಚಿಕ್ಕ ಪೆದ್ದನ್ನ ಅವರಿಗೆ ಟಿಕೆಟ್ ಕೇಳಿದ್ದು, ಆಶಾಭಾವನೆಯಂದಿದ್ದೇವೆ.

    4. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ನಮ್ಮ ಪರವಾಗುತ್ತದೆ. ಕಾದು ನೋಡೋಣ.

    5. ಕಾಂಗ್ರೆಸ್‌ನಲ್ಲಿ ಸಮಸ್ಯೆಗಳು ಸಹಜವಾಗಿಯೇ ಬಂದು ಹೋಗುತ್ತದೆ ನಾವು ನಮ್ಮ ಸ್ವಪ್ರತಿಷ್ಟೆಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net