ಹಾನಗಲ್ ಸೋಲು ವರದಿ ಕೇಳಿದ ಬಿಜೆಪಿ ವರಿಷ್ಠರು: ಮುಖ್ಯಮಂತ್ರಿ-ರಾಜ್ಯಾಧ್ಯಕ್ಷರ ಜತೆ ಉಸ್ತುವಾರಿ ಅರುಣ್ ಸಿಂಗ್ ಚರ್ಚೆ..

BJP
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದಲ್ಲಿನ ಸೋಲನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಸಿರುವ ರಾಜ್ಯ ಉಸ್ತುವಾರಿ ಅರುಣ್​ಸಿಂಗ್ ಯಾವ ಕಾರಣಗಳಿಗೆ ಸೋಲಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಮುಂದಿನ ಚುನಾವಣೆಗಳ ದೃಷ್ಟಿಯಿಂದ ಹಾನಗಲ್ ಗೆಲುವು ಅತ್ಯಂತ ಮುಖ್ಯವಾಗಿತ್ತು. ಆದರೆ ಮುಖ್ಯಮಂತ್ರಿ ತವರಿನಲ್ಲಿಯೇ ಸೋಲು ಮತದಾರರಿಗೆ ಬೇರೆಯದೇ ಆದ ಸಂದೇಶ ರವಾನೆ ಮಾಡುತ್ತದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಆದ್ದರಿಂದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಏನೇನು ಆಗಿದೆ ಎಂಬ ಸಂಪೂರ್ಣ ವಿವರ ಬೇಕಾಗಿದೆ ಎಂದು ಅರುಣ್​ಸಿಂಗ್ ನಿರ್ದೇಶನ ನೀಡಿದ್ದಾರೆ. ಅರುಣ್​ಸಿಂಗ್ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಅದರ ಆಧಾರದಲ್ಲಿಯೇ ವರದಿ ನೀಡುವಂತೆ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದಲ್ಲಿಯೇ ಕೆಲವರು ಕೈಕೊಟ್ಟಿದ್ದಾರೆ. ಕೆಲವರಿಗೆ ಹಾನಗಲ್​ನಲ್ಲಿ ಸೋಲು ಬೇಕಾಗಿತ್ತು ಎಂಬುದು ತಮ್ಮ ಗಮನಕ್ಕೆ ಬಂದಿದೆ. ಆ ಬಗ್ಗೆ ವೈಯಕ್ತಿಕವಾಗಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷರು ಅರುಣ್​ಸಿಂಗ್ ಅವರಿಗೆ ಹೇಳಿದ್ದಾರೆಂದು ಖಚಿತವಾಗಿದೆ. ನ. 8 ರಂದು ಬೆಂಗಳೂರಿಗೆ ಬರುತ್ತಿದ್ದು, ಆ ಸಂದರ್ಭದಲ್ಲಿ ಚರ್ಚೆ ಮಾಡೋಣ, ಸಂಪೂರ್ಣ ಮಾಹಿತಿಯೂ ಇರಲಿ ಎಂದು ಅರುಣ್​ಸಿಂಗ್ ಸೂಚನೆ ನೀಡಿದರೆಂದು ಹೇಳಲಾಗಿದೆ.

ಅರುಣ್ ಸಿಂಗ್ ಏನೇನು ಕೇಳಿದ್ದಾರೆ?

  • ಹಾನಗಲ್​ನಲ್ಲಿ ಸಂಘಟಿತ ಪ್ರಚಾರ ನಡೆಯಲಿಲ್ಲವೇ?
  • ಜವಾಬ್ದಾರಿ ಹೊತ್ತವರು ಅದನ್ನು ಸರಿಯಾಗಿ ನಿಭಾಯಿಸಿದ್ದಾರೆಯೇ?
  • ರಾಜ್ಯ ಮುಖಂಡರ ಪ್ರಚಾರ ವೈಖರಿ ಪರಿಣಾಮಕಾರಿಯಾಗಿರಲಿಲ್ಲವೇ?
  • ಯುವ ಸಮುದಾಯವನ್ನು ಸೆಳೆಯಲು ಸಾಧ್ಯವಾಗಲಿಲ್ಲವೇ?
  • ಹಾಲಿ ಸಂಸದರ ಪಾತ್ರ ಏನಿತ್ತು?
  • ಎಲ್ಲ ಸಮುದಾಯಗಳನ್ನು ಸೆಳೆಯಲು ಏಕೆ ಸಾಧ್ಯವಾಗಲಿಲ್ಲ?
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಏಕೆ ಆಗಲಿಲ್ಲ?
  • ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಎಡವಿದ್ದೆಲ್ಲಿ?

ಸಿಎಂ ಬೊಮ್ಮಾಯಿ ಹೇಳಿರುವುದೇನು?

  • ಕಾಂಗ್ರೆಸ್​ನ ಅಭ್ಯರ್ಥಿ ಶ್ರೀನಿವಾಸ ಮಾನೆ ಕಳೆದ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದಲ್ಲಿದ್ದು ಕೆಲಸ ಮಾಡಿದ್ದಾರೆ.
  • ಕರೊನಾ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಸ್ಪಂದಿಸಿದ್ದಾರೆ.
  • ನಾವು ಅಭ್ಯರ್ಥಿ ಆಯ್ಕೆಯಲ್ಲಿಯೇ ತಡ ಮಾಡಿದೆವು.
  • ದಿವಂಗತ ಸಿ.ಎಂ. ಉದಾಸಿ ಕುಟುಂಬಕ್ಕೆ ಟಿಕೆಟ್ ಕೊಡಬೇಕಾಗಿತ್ತು ಎಂಬ ಭಾವನೆ ಕ್ಷೇತ್ರದ ಕಾರ್ಯಕರ್ತರಲ್ಲಿ ಇತ್ತು.
  • ನಮ್ಮ ಪಕ್ಷದ ಮತಗಳು ಎಲ್ಲಿಯೂ ಚದುರದಂತೆ ಎಚ್ಚರಿಕೆ ವಹಿಸಿದ್ದೇವೆ.
  • ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ.

ಇನ್ನಷ್ಟು ಜನಪರ ಯೋಜನೆ ಭರವಸೆ

ಹುಬ್ಬಳ್ಳಿ: ಆರ್ಥಿಕ ಸ್ಥಿತಿ ಈಗಾಗಲೇ ಚೇತರಿಸಿಕೊಳ್ಳುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಯೋಜನೆಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ್ದು ದೊಡ್ಡ ಮೈಲುಗಲ್ಲು ಅಲ್ಲವಾದರೂ, ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಲವಾರು ಯೋಜನೆಗಳ ಮಾಸಾಶನಗಳ ಮೊತ್ತ ಹೆಚ್ಚಿಸಲಾಗಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಜ. 26ರ ನಂತರ ಜನಸೇವಕರನ್ನು ರಾಜ್ಯಾದ್ಯಂತ ನೇಮಿಸಿಕೊಳ್ಳಲಾಗುವುದು. ಈಗಾಗಲೇ ಬೆಂಗಳೂರಿನಲ್ಲಿ ಜನಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇಮಕಾತಿ ಮುಂಚೆ ವಿವಿಧ ತರಬೇತಿ ನೀಡುವ ಅಗತ್ಯವಿದೆ ಎಂದರು. ಜನರ ಬಳಿ ಸರ್ಕಾರದ ಸೇವೆಗಳನ್ನು ತೆಗೆದುಕೊಂಡು ಹೋಗುವ ಹಾಗೂ ಆರ್ಥಿಕ ಬೆಳವಣಿಗೆಗೆ ಮಾನವ ಸಂಪನ್ಮೂಲ ಉಪಯೋಗಿಸುವ ಚಿಂತನೆ ಇದೆ. ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲ ವರ್ಗದವರು ಪಾಲ್ಗೊಳ್ಳಬೇಕು. ಪ. ಜಾತಿ, ಪಂಗಡ, ಅಲ್ಪಸಂಖ್ಯಾತರು, ಬಡವರು, ಮಹಿಳೆಯರನ್ನು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುವುದಿಲ್ಲ. ಬೆಂಗಳೂರಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಳ್ಳಲಾಗುವುದು. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net