Israrel-Iran war | ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಲ್ಲಲಾಗಿದೆ ಎಂದ ಇಸ್ರೇಲಿ ಮಿಲಿಟರಿ

Untitled-design-2024-09-28T143606.520
Published on

ಜೆರುಸಲೇಮ್: ಇಸ್ರೇಲ್ ಲೆಬನಾನ್‌ನಲ್ಲಿ ಹಲವು ವೈಮಾನಿಕ ದಾಳಿಗಳನ್ನು ನಡೆಸಿತು. ಬೈರುತ್‌ನ ದಕ್ಷಿಣದ ಉಪನಗರಗಳಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ(ಸೆಪ್ಟೆಂಬರ್​​ 28) ದೃಢಪಡಿಸಿದೆ. ಇರಾನ್ ಬೆಂಬಲಿತ ಉಗ್ರಗಾಮಿ ಸಂಘಟನೆಯಾದ ಹಿಜ್ಬುಲ್ಲಾ, ಬಾಂಬ್ ದಾಳಿಯ ನಂತರ ತನ್ನ ನಾಯಕನ ಸ್ಥಳ ಅಥವಾ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯ ನೀಡಿಲ್ಲ.(Israrel-Iran war)

ಹಸನ್ ನಸ್ರಲ್ಲಾ ಮೃತಪಟ್ಟಿದ್ದಾನೆ ಎಂದು ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ದೃಢಪಡಿಸಿದ್ದಾರೆ.

ಹಮಾಸ್ ಮೇಲಿನ ದಾಳಿಯ ವಿರುದ್ಧ ಇಸ್ರೇಲ್‌ನೊಂದಿಗೆ ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪಿನ ನಾಯಕ ಹಸನ್ ನಸ್ರಲ್ಲಾ ಯುದ್ಧ ಮಾಡುತ್ತಿದ್ದಾನೆ. ಆದರೆ ಈಗ ಆತನೇ ಪ್ರಾಣ ಕಳೆದುಕೊಂಡಿದ್ದಾನೆ. ಇದಕ್ಕೂ ಮುನ್ನ ಇರಾನ್‌ನ ನೂತನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಇಸ್ರೇಲ್ ಸೇನೆಯು ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರನ್ನು ಹತ್ಯೆಗೈದಿತ್ತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಅಮೆರಿಕ ಪ್ರವಾಸವನ್ನು ಮಧ್ಯದಲ್ಲಿ ಬಿಟ್ಟು ಶುಕ್ರವಾರ ತಮ್ಮ ದೇಶಕ್ಕೆ ಹಿಂದಿರುಗಿದರು. ಹಸನ್ ನಸ್ರಲ್ಲಾ ಹತ್ಯೆಯ ನಂತರ ಐಡಿಎಫ್​​, ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಇಸ್ರೇಲ್‌ನ ವಿದೇಶಾಂಗ ಸಚಿವಾಲಯವು ಹಸನ್ ನಸ್ರಲ್ಲಾ ಅವರನ್ನು ಕೊಲ್ಲಲಾಗಿದೆ ಎಂದು ಬರೆದಿದೆ.

ಸಿರಿಯಾದ ಗಡಿಯಲ್ಲಿರುವ ಪೂರ್ವ ಲೆಬನಾನ್‌ನಲ್ಲಿರುವ ಬೆಕಾ ಕಣಿವೆಯಲ್ಲಿ ಹಿಜ್ಬುಲ್ಲಾ ಸ್ಥಾನಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿತ್ತು. ಕಳೆದ ವಾರ ಇಲ್ಲಿ ದಾಳಿ ನಡೆಸಿದ್ದರು. ಶುಕ್ರವಾರದ ನಂತರ ಇಂದು (ಶನಿವಾರ) ಬೈರುತ್‌ನಲ್ಲಿ ಮುಂಜಾನೆ ಐದು ಗಂಟೆಗಳ ಇಸ್ರೇಲಿ ಸೇನೆಯ ನಿರಂತರ ದಾಳಿಯಿಂದ ಲೆಬನಾನ್ ತತ್ತರಿಸಿತು. ಹೆಜ್ಬೊಲ್ಲಾ ಜತೆಗಿನ ಸಂಘರ್ಷ ಆರಂಭವಾದ ನಂತರ ಲೆಬನಾನ್ ಮೇಲೆ ನಡೆದ ಅತ್ಯಂತ ಶಕ್ತಿಶಾಲಿ ದಾಳಿ ಇದಾಗಿದೆ. ಈ ಮಾರಣಾಂತಿಕ ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯಸ್ಥನನ್ನು ಕೊಲ್ಲಲಾಗಿದೆ ಎಂದು ತಿಳಿಸಿದ ಬಳಿಕ ಎರಡು ಕಡೆಯೂ ಉದ್ವಿಗ್ನತೆ ಹೆಚ್ಚಾಗಿದೆ. ಈಗ ಈ ಸಂಘರ್ಷ ನಿಯಂತ್ರಣ ತಪ್ಪಬಹುದು. ಸಂಭಾವ್ಯವಾಗಿ, ಹೆಜ್ಬೊಲ್ಲಾಹ್‌ನ ಮುಖ್ಯ ಬೆಂಬಲಿಗ ಇರಾನ್ ಮತ್ತು ಇಸ್ರೇಲ್‌ನ ಬೆಂಬಲಿಗ ಯುನೈಟೆಡ್ ಸ್ಟೇಟ್ಸ್ ಕೂಡ ಈ ಯುದ್ಧಕ್ಕೆ ಸೇರಬಹುದು ಎನ್ನಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net