

ಚೆನ್ನೈ: ವೈದ್ಯಕೀಯ ಕೋರ್ಸ್‌ಗಳನ್ನು ಓದುವ ಹಂಬಲದಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಟ್ ಅಕ್ರಮಗಳಿಂದ ತೊಂದರೆಯಾಗುತ್ತಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ತಮಿಳಗ ವೆಟ್ರಿ ಕಳಗಂ ನಾಯಕ ಮತ್ತು ನಟ ವಿಜಯ್ ಒತ್ತಾಯಿಸಿದ್ದಾರೆ.
ನೀಟ್‌ನಿಂದ ರಾಜ್ಯವನ್ನು ಹೊರಗಿಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ನಿರ್ಣಯವನ್ನು ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರ ತೆಗೆದುಕೊಂಡಿರುವುದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಅವರು ಘೋಷಿಸಿದರು.
ತಿರುವನ್ಮಿಯೂರಿನಲ್ಲಿ 10ನೇ ತರಗತಿ ಹಾಗೂ ಪ್ಲಸ್-2 ಪರೀಕ್ಷೆಯಲ್ಲಿ ಉತ್ತೀರ್ಣರಾದ 640 ವಿದ್ಯಾರ್ಥಿಗಳಿಗೆ ನಗದು ಹಾಗೂ ಶೈಕ್ಷಣಿಕ ಸಾಮಗ್ರಿ ವಿತರಿಸಿ ಮಾತನಾಡಿದರು.
ನೀಟ್ ನಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಅದರಲ್ಲೂ ದೂರದ ಹಳ್ಳಿಗಳ ಬಡ ವಿದ್ಯಾರ್ಥಿಗಳು, ಬಿಸಿ, ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ವೈದ್ಯಕೀಯ ಕೋರ್ಸ್ ಗಳಿಂದ ದೂರ ಉಳಿಯುತ್ತಿದ್ದಾರೆ. ಈ ಪರೀಕ್ಷೆ ರಾಜ್ಯದ ಹಕ್ಕುಗಳಿಗೆ ವಿರುದ್ಧವಾಗಿದೆ. 1975ಕ್ಕೂ ಮೊದಲು ಶಿಕ್ಷಣ ರಾಜ್ಯಗಳ ಪಟ್ಟಿಯಲ್ಲಿತ್ತು, ಆದರೆ ಕೇಂದ್ರ ಸರ್ಕಾರ ಜಂಟಿ ಪಟ್ಟಿಗೆ ಸೇರಿಸಿದ್ದು, ಅಂದಿನಿಂದ ಸಮಸ್ಯೆ ಶುರುವಾಗಿದೆ. ಒಂದು ದೇಶ, ಒಂದು ಪಠ್ಯಕ್ರಮ ಮತ್ತು ಒಂದು ಪರೀಕ್ಷೆ ಎಂಬ ಸಿದ್ಧಾಂತ ಶಿಕ್ಷಣದ ಮಹತ್ವಾಕಾಂಕ್ಷೆಗೆ ವಿರುದ್ಧವಾಗಿದೆ ಎಂದರು.
ಪ್ರತಿ ರಾಜ್ಯಕ್ಕೆ ಅನುಗುಣವಾಗಿ ವಿಭಿನ್ನ ಪಠ್ಯಕ್ರಮ ಜಾರಿಯಾಗುವುದು ಒಳ್ಳೆಯದು. ರಾಜ್ಯದ ಹಕ್ಕುಗಳಿಗಾಗಿ ಮಾತ್ರ ಹೇಳಿಕೆ ನೀಡದೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡುವುದೇ ತಮ್ಮ ಮಹತ್ವಾಕಾಂಕ್ಷೆ ಎಂದರು.
ವೈವಿಧ್ಯತೆ ಅಥವಾ ವೈವಿಧ್ಯತೆಯಲ್ಲಿ ಏಕತೆಯನ್ನು ದೇಶದ ಶಕ್ತಿ ಎಂದು ಪರಿಗಣಿಸಬೇಕೇ ಹೊರತು ದೌರ್ಬಲ್ಯವಲ್ಲ. ಪ್ರಾದೇಶಿಕ ಭಾಷೆಯಲ್ಲಿ ರಾಜ್ಯ ಪಠ್ಯಕ್ರಮದ ಮೂಲಕ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಪರೀಕ್ಷೆ ನಡೆಸುತ್ತಿರುವುದು ಅನ್ಯಾಯವಾಗಿದೆ. ರಾಜ್ಯ ಪಠ್ಯಕ್ರಮದಲ್ಲಿ ಪ್ಲಸ್-2 ವರೆಗೆ ಓದಿದ ಹಳ್ಳಿಗಳ ವಿದ್ಯಾರ್ಥಿಗಳು ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಸಿದ್ಧಪಡಿಸಿದ ನೀಟ್ ಪರೀಕ್ಷೆಯನ್ನು ಹೇಗೆ ಸುಲಭವಾಗಿ ಬರೆಯುತ್ತಾರೆ ಎಂದು ವಿಜಯ್ ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಅವ್ಯವಹಾರ ನಡೆದಿರುವುದರಿಂದ ಪರೀಕ್ಷೆಯ ಮೇಲೆ ಇದ್ದ ನಂಬಿಕೆ ಸಂಪೂರ್ಣ ಹದಗೆಟ್ಟಿದೆ. ನೀಟ್ ಸೋರಿಕೆಯಾದ ನಂತರ ದೇಶದೆಲ್ಲೆಡೆ ನೀಟ್ ಅನಗತ್ಯ ಎಂಬ ಭಾವನೆ ಮೂಡಿದೆ. ಇವೆಲ್ಲಕ್ಕೂ ಪರಿಹಾರ ಎಂಬಂತೆ ರಾಜ್ಯ ಸರ್ಕಾರಕ್ಕೆ ನೀಟ್ ನಿಂದ ವಿನಾಯಿತಿ ನೀಡುವಂತೆ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ವಿಜಯ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.