ಪ್ರಧಾನಿ ಭೇಟಿಯಾದ ಟೀಮ್​ ಇಂಡಿಯಾ ಆಟಗಾರರು..ಹೃತ್ಪೂರ್ವಕವಾಗಿ ಅಭಿನಂದಿಸಿದ ಮೋದಿ

cricket
Published on

ನವದೆಹಲಿ: ರೋಹಿತ್​ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಆಟಗಾರರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಕ್ರಿಕೆಟ್ ತಂಡವು ಬಾರ್ಬಡೋಸ್‌ನಿಂದ ಗುರುವಾರ ಬೆಳಗ್ಗೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ತವರಿಗೆ ತಲುಪಿದರು. ಈ ಸಂದರ್ಭದಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.

ಬಳಿಕ ತಂಡದ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತೆರಳಿದರು. ಎಲ್ಲ ಆಟಗಾರರು ಪ್ರಧಾನಿ ಜತೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕ್ರಿಕೆಟಿಗರನ್ನು ಮೋದಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಅಭಿನಂದಿಸಿದರು. ಸುಮಾರು 1ಗಂಟೆ ಸಭೆ ಸಹ ನಡೆಯಿತು.

ಟಿ 20 ವಿಶ್ವಕಪ್ ವಿಜಯವು ಮುಂದಿನ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೋದಿಯವರು ತಂಡವನ್ನು ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ವಕಪ್ ಅಭಿಯಾನವನ್ನು ಮೆಲುಕು ಹಾಕಿದ್ದು ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಎಲ್ಲವನ್ನು ವಿವರಿಸಿದ್ದಾರೆ. ಈ ವೇಳೆ ಆಟಗಾರರು ಪ್ರಧಾನಿಯವರ ಜೊತೆಯಲ್ಲಿ ಕುಳಿತಿದ್ದರು. ಈ ಅಭಿನಂದನಾ ಸಭೆ ಸುಮಾರು 1ಗಂಟೆ ನಡೆದಿದ್ದು, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಸಭೆಯಲ್ಲಿ ಮಾತನಾಡಿದರು.

ಬಳಿಕ ಪ್ರಧಾನಿ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಆಟಗಾರರು ತೆರಳಿದರು. ಅವರು ಅಲ್ಲಿಂದ ನೇರವಾಗಿ ಮುಂಬೈಗೆ ಹೊರಟರು. ಸಂಜೆ 5 ಗಂಟೆಗೆ ರಸ್ತೆ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಅವರನ್ನು ಸನ್ಮಾನಿಸಲಾಗುವುದು.

ಇದಕ್ಕೂ ಮುನ್ನ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಐಟಿಸಿ ಮೌರ್ಯದಲ್ಲಿ ಅದ್ದೂರಿ ಸ್ವಾಗತ ದೊರಕಿತು. ನಾಯಕ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಮತ್ತು ವಿರಾಟ್ ಕೊಹ್ಲಿ ಅವರು ಹೋಟೆಲ್‌ನಲ್ಲಿ ಬಾಣಸಿಗರು ಸಿದ್ಧಪಡಿಸಿದ ವಿಶೇಷ ಕೇಕ್ ಅನ್ನು ಕತ್ತರಿಸಿದರು.

ವಿಶ್ವಕಪ್​ ಗೆದ್ದ ಬಳಿಕ ಸ್ವತಃ ಮೋದಿಯವರೇ ಆಟಗಾರರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದು ಗೊತ್ತೇ ಇದೆ. ಸುಮಾರು 11 ವರ್ಷಗಳ ನಂತರ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಲು 17 ವರ್ಷ ತೆಗೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net