

ಬೆಂಗಳೂರು: ‘ಟಕ್ಕರ್’ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಮನೋಜ್ ನಟಿಸುತ್ತಿರುವ ಎರಡನೇ ಸಿನಿಮಾ ‘ಧರಣಿ’. ಇತ್ತೀಚೆಗಷ್ಟೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ‘‘ಟಕ್ಕರ್’ ಜತೆ ‘ಧರಣಿ’ಯನ್ನು ಹೋಲಿಸಲು ಸಾಧ್ಯವಿಲ್ಲ. ಕೋಳಿ ಕಾಳಗದಂತೆಯೇ ನೋಡುಗರನ್ನು ರಂಜಿಸುತ್ತಲೇ ಕಾಡುವ ಅಂಶಗಳು ಈ ಚಿತ್ರದಲ್ಲಿವೆ. ನನ್ನ ಲುಕ್ ಕೂಡ ಬೇರೆಯ ರೀತಿಯಿದೆ. ಈಗೀಗ ಕಂಟೆಂಟ್ ಸಿನಿಮಾಗಳನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ‘ಧರಣಿ’ ಹೊಸ ವಿಚಾರಗಳ ಸುತ್ತ ಆವರಿಸಿಕೊಂಡಿರುವ ಕಮರ್ಷಿಯಲ್ ಸಿನಿಮಾ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಾಯಕ ಮನೋಜ್.
ಈ ಹಿಂದೆ ವಿನಯ್ ರಾಜಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸುಧೀರ್ ಶಾನುಭೋಗ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ‘ಇದು ಪಕ್ಕಾ ದೇಸೀ ಸೊಗಡಿನ ಸಿನಿಮಾ. ಕರ್ನಾಟಕ ಮಾತ್ರವಲ್ಲದೇ ಭಾರತದ ಬೇರೆ ರಾಜ್ಯಗಳಲ್ಲೂ ಕೋಳಿ ಪಂದ್ಯ ಬರಿಯ ಮನರಂಜನೆ ಅಲ್ಲದೆ ಅಪಾರ ಪ್ರಮಾಣದ ವಹಿವಾಟು ನಡೆಸುವ ಜೂಜಾಗಿದೆ. ಅದರ ಸುತ್ತ ‘ಧರಣಿ’ ಕಥೆ ಸುತ್ತುತ್ತದೆ. ಅಲ್ಲದೇ ಈವರೆಗೆ ಎಲ್ಲೂ ಹೇಳಿರದ ಒಂದಷ್ಟು ವಿಚಾರಗಳೂ ಇಲ್ಲಿ ದೃಶ್ಯರೂಪದಲ್ಲಿ ಅನಾವರಣ ಗೊಳ್ಳಲಿದೆ’ ಎಂದು ಹೇಳಿಕೊಳ್ಳುತ್ತಾರೆ ಸುಧೀರ್. ಅವರು ನಿರ್ದೇಶಿಸಿರುವ ಮತ್ತೊಂದು ಚಿತ್ರ ‘ಮಾರೀಚ’ ಸದ್ಯ ಬಿಡುಗಡೆಗೆ ರೆಡಿಯಾಗಿದೆ.