

ಷಿಕಾಗೊ: ವಿದೇಶಿ ನೌಕರರಿಗೆ ಪ್ರತಿ ವರ್ಷ ಮಂಜೂರು ಮಾಡುವ ವೀಸಾಗಳ ಸಂಖ್ಯೆ ನಿರ್ಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊರಡಿಸಿದ್ದ ಎರಡು ಆದೇಶಗಳನ್ನು ಫೆಡರಲ್ ನ್ಯಾಯಾಲಯ ರದ್ದುಪಡಿಸಿದೆ. ಇದು ಭಾರತೀಯ ಟೆಕ್ಕಿಗಳಿಗೆ ಸಂತಸದ ಸಂಗತಿಯಾಗಿದೆ.
ಎಚ್1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ ನಿಯಮಗಳನ್ನು ಅಕ್ಟೋಬರ್ನಲ್ಲಿ ಬದಲಾಯಿಸಲಾಗಿತ್ತು. ಎಲ್ಲ ಬಗೆಯ ವಲಸೆಗಳನ್ನು ನಿಯಂತ್ರಿಸುವ ವ್ಯಾಪಕ ಯೋಜನೆಯ ಅಂಗವಾಗಿ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳ ಮುಂಚೆ ಟ್ರಂಪ್ ಆಡಳಿತ ಹೊಸ ನಿಯಮ ಪ್ರಕಟಿಸಿತ್ತು. ಇದನ್ನು ಹಲವರು ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಕರೊನಾ ವೈರಸ್ ಹಾವಳಿಯಿಂದ ಉದ್ಯೋಗ ನಷ್ಟವಾಗಿ ರುವುದರಿಂದ ವಿದೇಶಿ ನೌಕರರ ಸಂಖ್ಯೆಯನ್ನು ಮಿತಿಗೊಳಿಸುವುದು ಅಗತ್ಯ ಎಂದು ಹೋಮ್್ಯಾಂಡ್ ಸೆಕ್ಯುರಿಟಿ ಇಲಾಖೆಯ ಅಧಿಕಾರಿಗಳು ಹೇಳಿದ್ದರು. ಇತ್ತೀಚಿನ ವರ್ಷಗಳಲ್ಲಿ ಎಚ್1ಬಿ ವೀಸಾಕ್ಕೆ ಸಲ್ಲಿಸಲಾದ ಅರ್ಜಿಗಳ ಪೈಕಿ ಕನಿಷ್ಠ ಮೂರನೇ ಒಂದರಷ್ಟು ಅರ್ಜಿಗಳನ್ನು ಹೊಸ ನಿಯಮದನ್ವಯ ತಿರಸ್ಕರಿಸುವ ಸಂಭವವಿದೆ. ನಿಯಮಗಳನ್ನು ಬದಲಾಯಿಸುವಾಗ ಸರ್ಕಾರ ಪಾರದರ್ಶಕತೆ ಪಾಲಿಸಿಲ್ಲ. ಕರೊನಾ ಮಹಾಮಾರಿಯಿಂದ ಸೃಷ್ಟಿಯಾದ ನಿರುದ್ಯೋಗ ಸಮಸ್ಯೆ ಎದುರಿಸುವ ತುರ್ತು ಕ್ರಮವಿದು ಎಂಬ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ, ಟ್ರಂಪ್ ಆಡಳಿತ ಮೊದಲೇ ಇಂಥ ಚಿಂತನೆ ಹೊಂದಿದ್ದು, ಅಕ್ಟೋಬರ್ನಲ್ಲಿ ಅದನ್ನು ಪ್ರಕಟಿಸಿದೆ ಎಂದು ಜಿಲ್ಲಾ ನ್ಯಾಯಾಧೀಶ ಜೆಫ್ರಿ ವೈಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.