

ತಮಿಳುನಾಡಿನ ಆನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸುದ್ದಿಯಾಗಿದೆ. ಆದರೆ ಕಾರಣ ಮಾತ್ರ ನಿಜಕ್ಕೂ ಅಚ್ಚರಿ ತರಿಸುವಂಥದ್ದು.
ಇಲ್ಲೊಂದು ಹೆಣ್ಣಾನೆ ತನ್ನ ಸೂಪರ್, ವಿಭಿನ್ನವಾದ ಹೇರ್ಸ್ಟೈಲ್ನಿಂದ ಸುದ್ದಿಯಾಗಿದೆ. ತಮಿಳುನಾಡಿನ ಮನ್ನಾರ್ಗುಡಿ ಪಟ್ಟಣದಲ್ಲಿರುವ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸೆಂಗಮಲಮ್ ಎಂಬ ಆನೆಯಿದೆ. ಅದರ ಕೂದಲಿಗೆ ಮಾಡಲಾದ ಬಾಬ್ ಕಟ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ದೇವಸ್ಥಾನಕ್ಕೆ ಬಂದು ಆನೆ ನೋಡಿದವರೆಲ್ಲ ಅದರ ಹೇರ್ಸ್ಟೈಲ್ ಮೇಲೆ ಕಣ್ಣು ಹಾಕುತ್ತಿದ್ದಾರೆ. ಸೆಂಗಮಲಮ್ಗೆ ಬಾಬ್ ಕಟ್ ಸೆಂಗಮಲಮ್ ಎಂದೇ ಹೆಸರು ಬಂದಿದೆ.
ಈ ಆನೆಯನ್ನು 2013ರಲ್ಲಿ ಕೇರಳದಿಂದ ತಮಿಳುನಾಡಿಗೆ ಕರೆತರಲಾಗಿದೆ. ಇದರ ಇತ್ತೀಚಿನ ಎರಡು ಫೋಟೋವನ್ನು ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಆನೆ ಬಾಬ್ ಕಟ್ ಸೆಂಗಮಲಮ್ ಎಂದೇ ಪ್ರಸಿದ್ಧವಾಗಿದೆ. ಇದರ ಹೇರ್ಸ್ಟೈಲ್ಗೆ ಸಿಕ್ಕಾಪಟೆ ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದನ್ನೂ ಓದಿ: ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ; ತನಿಖೆ ನಡೆದಷ್ಟೂ ಪೊಲೀಸರೇ ಸಿಕ್ಕಿಬೀಳುತ್ತಿದ್ದಾರೆ…!
ಆನೆಗೆ ವಿಭಿನ್ನವಾಗಿ ಹೇರ್ ಕಟ್ ಮಾಡಿದ್ದು, ಅದರ ಮಾವುತ ಎಸ್. ರಾಜಗೋಪಾಲ್ ಅವರು. ಇದಕ್ಕೆ ಸ್ನಾನ ಮಾಡಿಸಲೆಂದೇ 2018ರಲ್ಲಿ 45,000 ರೂ.ವೆಚ್ಚದಲ್ಲಿ ಶವರ್ ನಿರ್ಮಾಣ ಮಾಡಿದ್ದಾರೆ.
ಸೆಂಗಮಲಮ್ ನನ್ನ ಮಗುವಿದ್ದ ಹಾಗೆ. ಅದು ಚೆನ್ನಾಗಿ ಕಾಣಿಸಬೇಕು ಎಂಬುದು ನನ್ನ ಆಸೆ. ಒಂದು ಬಾರಿ ಪುಟ್ಟ ಆನೆ ಮರಿಗೆ ಬಾಬ್ ಕಟ್ ಮಾಡಿದ್ದನ್ನು ಇಂಟರ್ನೆಟ್ನಲ್ಲಿ ನೋಡಿದೆ. ತುಂಬ ಇಷ್ಟವಾಯಿತು. ಅದನ್ನು ಸೆಂಗಮಲಮ್ ಮೇಲೆಯೂ ಪ್ರಯೋಗ ಮಾಡಿದೆ. ಕಳೆದ ಆರು ವರ್ಷಗಳಿಂದಲೂ ಅದರ ಕೂದಲನ್ನು ಜೋಪಾನವಾಗಿ ನಿರ್ವಹಣೆ ಮಾಡುತ್ತಿದ್ದೇನೆ ಎಂದು ರಾಜಗೋಪಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)