Jharkhand CM ಆಗಿ ಹೇಮಂತ್​ ಸೊರೇನ್​ ಪದಗ್ರಹಣ; ಯಾರಿಗೆಲ್ಲಾ ಆಹ್ವಾನ?, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್

Soren
Published on

ರಾಂಚಿ: ಈಚೆಗೆ ಮುಕ್ತಾಯಗೊಂಡ ಜಾರ್ಖಂಡ್​ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್​ ನೇತೃತ್ವದ ಮೈತ್ರಿಕೂಟವು ಭರ್ಜರಿ ಜಯಗಳಿಸಿದ್ದು, ಹೇಮಂತ್ ಸೊರೇನ್‌ ಅವರು ಇಂದು (ನವೆಂಬರ್​ 28) ಮುಖ್ಯಮಂತ್ರಿಯಾಗಿ (jharkhand Cm) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಇಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸೊರೇನ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇಂಡಿಯಾ ಮೈತ್ರಿಕೂಟದ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಂಚಿಯ ಮೊರಾಬಾಡಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ರಾಂಚಿ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ.

ನವೆಂಬರ್​ 13 ಹಾಗೂ 20ರಂದು ಜಾರ್ಖಂಡ್​ ವಿಧಾನಸಭೆಗೆ ನಡೆದ ಮತದಾನದಲ್ಲಿ ಇಂಡಿಯಾ ಒಕ್ಕೂಟ ಸತತ 2ನೇ ಬಾರಿಗೆ ಅಧಿಕಾರ ಹಿಡಿಯಿತು. 81 ಸ್ಥಾನಗಳಲ್ಲಿ ಜೆಎಂಎಂ 34 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 21, ಕಾಂಗ್ರೆಸ್ 16, ಆರ್‌ಜೆಡಿ 4 ಮತ್ತು ಸಿಪಿಐ (ಎಂಎಲ್) ಎರಡು ಸ್ಥಾನಗಳನ್ನು ಗೆದ್ದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net