

ಶಿವಮೊಗ್ಗ: ದೇಹ, ಮನಸ್ಸು ಮತ್ತು ಆತ್ಮವನ್ನು ಸಂಯೋಜಿಸುವ ಮನುಷ್ಯ ಪಂಚೇದ್ರಿಯಗಳ ಮೇಲೆ ಹಿಡಿತ ಸಾಧಿಸಲು ಸಹಕರಿಸುವ ಯೋಗವನ್ನು ಎಲ್ಲರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಯೋಗವನ್ನು ಇಡೀ ಪ್ರಪಂಚ ಒಪ್ಪಿದೆ. ಜಾಗತಿಕ ಆಚರಣೆಯು ಐಕ್ಯ ಮತ್ತು ಸಾಮರಸ್ಯ ಬೆಳೆಸುತ್ತದೆ. ನಮ್ಮ ದೇಶ ವಿಶ್ವಗುರು ಆಗಬೇಕಾದರೆ ನಾವೆಲ್ಲರೂ ಆರೋಗ್ಯವಂತ ದೇಹ ಮತ್ತು ಮನಸ್ಸು ಹೊಂದುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ್ ಕೇಕುಡ ಮಾತನಾಡಿ, ವಿಶ್ವದಲ್ಲಿ 23 ಕೋಟಿ ಜನ ಇಂದಿನ ದಿನ ಯೋಗದಲ್ಲಿ ತೊಡಗಿದ್ದಾರೆ. ಸಾಮೂಹಿಕ ಯೋಗಾಭ್ಯಾಸಕ್ಕೆ ಸಂಬಂಧಿಸಿ ಈಗಾಗಲೇ 17 ಗಿನ್ನೆಸ್ ದಾಖಲೆ ಮಾಡಲಾಗಿದೆ. ಇನ್ನೊಂದು ಗಿನ್ನೆಸ್ ದಾಖಲೆಗೆ ದೇಶ ಸನ್ನದ್ದವಾಗಿದೆ ಎಂದರು.
ಬಿಡುವಿಲ್ಲದ ಒತ್ತಡದ ಜೀವನದಲ್ಲಿ 2 ರಿಂದ 5 ನಿಮಿಷದ ಯೋಗಾಭ್ಯಾಸ ಮಾಡಲು ವೈ ಬ್ರೇಕ್ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆ 10 ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಲಾಗಿದೆ ಎಂದರು.
ಬಾಪೂಜಿ ಆಯುರ್ವೇದಿಕ್ ಕಾಲೇಜು ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು. ಯೋಗ ದಿನ ಪ್ರಯುಕ್ತ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ ಎಸ್.ಹಿಂಡಸಗಟ್ಟಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಯುವಕುಮಾರ್, ಆರ್‌ಎಎಫ್ ಕಮಾಂಡೆಂಟ್ ಪ್ರದೀಪ್, ಡಿಎಚ್‌ಒ ಡಾ. ನಟರಾಜ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕಾ ಮತ್ತಿತರರಿದ್ದರು.