ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಅಗತ್ಯ ನೆರವು: ಜಿಪಂ ಸಿಇಒ ಉಕೇಶ್‌ಕುಮಾರ್ ಹೇಳಿಕೆ, ರೇಷ್ಮೆ ಕೃಷಿಯ ಪರಿಚಯಕ್ಕಾಗಿ ಕ್ಷೇತ್ರ ಭೇಟಿ

8-klr-8 Alternative
Published on

ಕೋಲಾರ: ರೇಷ್ಮೆ ಬೆಳೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಚಟುವಟಿಕೆಯ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಳ್ಳುವ ಸಲುವಾಗಿ ಜಿಪಂ ಸಿಇಒ ಉಕೇಶ್ ಕುಮಾರ್ ಬುಧವಾರ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರ ಭೇಟಿ ನಡೆಸಿ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಗೆ ಭೇಟಿ ನೀಡಿದ್ದ ಅವರು, ಅಲ್ಲಿನ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರಲ್ಲದೇ ವಿವಿಧ ವಿಭಾಗಗಳನ್ನು ವೀಕ್ಷಿಸಿದರು.

ಎಫ್‌ಪಿಒ ಕಚೇರಿಗೆ ಭೇಟಿ ನೀಡಿದಾಗ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಹಾಗೂ ಶ್ರೀನಿವಾಸಪುರ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಮಾರಾಟ ಮಳಿಗೆ ತೆರೆಯುವ ಪ್ರಕ್ರೀಯೆ ಪ್ರಗತಿಯಲ್ಲಿರುವ ಬಗ್ಗೆ ಎಫ್‌ಫಿಒ ಅಧ್ಯಕ್ಷ ಬಳಗೆರೆ ಶಂಕರೇಗೌಡ ಮಾಹಿತಿ ಒದಗಿಸಿದರು.

ತಾಲೂಕಿನ ಬೆಟ್ಟಬೆಣಜೇನಹಳ್ಳಿಯ ರೈತ ಮುನಿಯಪ್ಪ, ಬೈಚೇಗೌಡ ಅವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಗುಣಿ ಪದ್ಧತಿಯಲ್ಲಿ ನಾಟಿ ವಿಧಾನ, ನೀರು, ಗೊಬ್ಬರದ ಬಳಕೆ, ನರೇಗಾ ಯೋಜನೆಯ ಬಳಕೆ ಕುರಿತು ಮಾಹಿತಿ ಪಡೆದರು. ಪಾರ್ಶ್ವಗಾನಹಳ್ಳಿಯಲ್ಲಿ ಮರ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆದಿರುವ ನಾರಾಯಣಪ್ಪ ತೋಟಕ್ಕೆ ಭೇಟಿ ನೀಡಿದರು.

ಜಂಗಾಲಹಳ್ಳಿಯಲ್ಲಿ ವಿಶ್ವನಾಥ್ ಅವರ ಚಾಕಿ ಸಾಕಾಣಿಕೆ ಕೇಂದ್ರಕ್ಕೆ ತೆರಳಿ ರೇಷ್ಮೆ ಮೊಟ್ಟೆ, ಹುಳು ಚಾಕಿ ಮಾಡುವ ವಿಧಾನ, ನಿರ್ವಹಣೆ, ಚಾಕಿ ಮಾಡಿದ ರೇಷ್ಮೆ ಹುಳುಗಳ ಮಾರಾಟದ ಬಗ್ಗೆ ತಿಳಿದುಕೊಂಡರು.

ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿದ ಸಿಇಒ ದ್ವಿತಳಿ ಗೂಡು, ಬೈವೋಲ್ಟೀನ್ ಗೂಡುಗಳ ಗುಣಮಟ್ಟ ಪರಿಶೀಲಿಸಿದರಲ್ಲದೆ ಹರಾಜು ಪ್ರಕ್ರೀಯೆ ಬಗ್ಗೆ ತಿಳಿದರು. ಮಾರುಕಟ್ಟೆಯಲ್ಲಿ ಇ ಹರಾಜು ಮತ್ತು ಇ-ಪಾವತಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಇ-ಪಾವತಿ ವ್ಯವಸ್ಥೆ ಜಾರಿಗೆ ಬಂದ ನಂತರ ಮಾರುಕಟ್ಟೆ ಹೊರಗಡೆ ಕೆಲ ರೀಲರ್‌ಗಳು ರೈತರ ಬಳಿ ನೇರವಾಗಿ ಗೂಡು ಖರೀದಿಸುತ್ತಿರುವುದರಿಂದ ನಮಗೆ ತೊಂದರೆ ಆಗಿದೆ. ನಿಯಂತ್ರಣಕ್ಕೆ ಕಾನೂನು ತರಬೇಕೆಂದು ರೀಲರ್ಸ್‌ ಫಯಾಜ್ ಸಿಇಒ ಗಮನಕ್ಕೆ ತಂದಾಗ ಲಿಖಿತ ಮನವಿ ನೀಡಿ, ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ಉಕೇಶ್‌ಕುಮಾರ್ ತಿಳಿಸಿದರು.

ನಗರ ಹೊರವಲಯದ ಹೂಹಳ್ಳಿಯಲ್ಲಿನ ಸ್ವಯಂಚಾಲಿತ ನೂಲು ಬಿಚ್ಚಾಣಿಕಾ ಕೈಗಾರಿಕೆಗೆ ಭೇಟಿ ನೀಡಿದ ಸಿಇಒ ಮಾಲಿಕ ಮಹಮದ್ ಖಲೀಲ್ ಅವರಿಂದ ನೂಲು ಬಿಚ್ಚಾಣಿಕೆಯ ಹಂತಗಳ ಕುರಿತು ಮಾಹಿತಿ ಪಡೆದರು.

ಮಾಹಿತಿ ಒದಗಿಸಿದ ಉಪನಿರ್ದೇಶಕ ಟಿ.ಎಂ.ಕಾಳಪ್ಪ, ರೈತ ಮುನಿಯಪ್ಪ ನರೇಗಾ ಸೌಲಭ್ಯ ಪಡೆದುಕೊಂಡು ನಿರ್ವಹಿಸಿರುವ ಹಿಪ್ಪುನೇರಳೆ ಕೃಷಿ ರಾಜ್ಯದಲ್ಲೇ 10 ಮಾದರಿ ತೋಟಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ 3ಎ, 4ಎ ಗ್ರೇಡ್‌ನ ಗುಣಮಟ್ಟದ ರೇಷ್ಮೆ ಚೀನಾ ಪೈಪೋಟಿಗೆ ಜಿಲ್ಲೆ ಸೆಡ್ಡು ಹೊಡೆದಿದೆ ಎಂದು ವಿವರಿಸಿದರು.

ಸಹಾಯಕ ನಿರ್ದೇಶಕ ಮಂಜುನಾಥ್ ರೇಷ್ಮೆ, ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗನಾಳ ಶ್ರೀನಿವಾಸ್, ವೇಮಗಲ್ ವಿಸ್ತರಣಾಧಿಕಾರಿ ಚಂದ್ರಶೇಖರಗೌಡ, ರೇಷ್ಮೆ ನಿರೀಕ್ಷಕ ರಿಯಾಜ್ ಅಹಮದ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net