ಮೇಲುಕೋಟೆ ಸ್ವಚ್ಛತೆ ಕಾಪಾಡಲು ಸಹಕಾರ ನೀಡಿ

9mlk1
Published on

ಮೇಲುಕೋಟೆ: ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವಕ್ಕೆ ಸ್ವಚ್ಛತೆಯ ಮುನ್ನುಡಿ ಬರೆಯಲಾಗುತ್ತಿದ್ದು, ಭಕ್ತರು ಹಾಗೂ ನಾಗರಿಕರು ಮೇಲುಕೋಟೆಯ ಸ್ವಚ್ಛತೆ ಕಾಪಾಡಲು ಸಹಕಾರ ನೀಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.


ಮೇಲುಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಕರ್ನಾಟಕದ ಪವಿತ್ರ ಕ್ಷೇತ್ರವಾದ ಮೇಲುಕೋಟೆಯಲ್ಲಿ ಸ್ವಯಂಸೇವಾ ತಂಡಗಳು ಹಾಗೂ ಭಕ್ತರು ಮುಂದೆ ಬಂದು ಪ್ರತಿ ಶನಿವಾರ ಅಥವಾ ಭಾನುವಾರ ಸ್ವಚ್ಛತಾ ಶಿಬಿರಗಳನ್ನು ಆಯೋಜಿಸಬೇಕು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ತಿಂಗಳಿಗೊಂದು ದಿನ ಸ್ಮಾರಕಗಳ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದ ಶಾಸಕರು, ಭಕ್ತರು ಮತ್ತು ನಾಗರಿಕರು ಮೇಲುಕೋಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಕೆ ಮಾಡಬಾರದು, ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾಪಾಡುವ ಸಂಬಂಧ ಅಲ್ಲಲ್ಲಿ ನಾಮಫಲಕ ಹಾಕಬೇಕು, ರಾಯಗೋಪುರ, ಅಕ್ಕ-ತಂಗಿಕೊಳ ಹಾಗೂ ಇತರ ಕಡೆ ನಗರಗಳ ಉದ್ಯಾನದಲ್ಲಿರುವಂತೆ ಆಕರ್ಷಕ ಕಸದ ತೊಟ್ಟಿಗಳನ್ನು ಅಳವಡಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.


ವೈರಮುಡಿ ಜಾತ್ರಾ ಮಹೋತ್ಸವದ ವೇಳೆ ಮಾ.16ರಿಂದ 28ರವರೆಗೆ ನಿರಂತರ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗಿದೆ. ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ಪೌರಕಾರ್ಮಿಕರನ್ನು ನಿಯೋಜಿಸಿ ಪ್ರತಿದಿನ ನಿರಂತರ ಸ್ವಚ್ಛತೆ ಕಾಪಾಡಲು ಕ್ರಮವಹಿಸಲಾಗಿದೆ ಎಂದರು.


ನೂರಕ್ಕೂ ಹೆಚ್ಚು ರೈತಸಂಘದ ಕಾರ್ಯಕರ್ತರೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚೆಲುವನಾರಾಯಣಸ್ವಾಮಿ ದೇವಾಲಯದ ಆವರಣ, ರಾಯಗೋಪುರ, ಅಕ್ಕತಂಗಿಕೊಳ ಆವರಣ, ಕಲ್ಯಾಣಿ ಆವರಣಗಳಲ್ಲಿ ಗಿಡಗಂಟಿಗಳನ್ನು ಕಿತ್ತು, ಅಲ್ಲಲ್ಲಿ ಬಳಸಿ ಎಸೆದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಮೇಲುಕೋಟೆಯಲ್ಲಿ ನಿರಂತರವಾಗಿ ಶುಚಿತ್ವ ಕಾಪಾಡಲು ಗ್ರಾಮ ಪಂಚಾಯಿತಿ ಮತ್ತು ದೇವಾಲಯದ ಆಡಳಿತ ಶ್ರಮಿಸಬೇಕು. ಪೌರಕಾರ್ಮಿಕರನ್ನು ನಿಯೋಜಿಸಬೇಕು ಎಂದೂ ಸೂಚನೆ ನೀಡಿದರು.


ಸ್ವಚ್ಛತಾ ಆಂದೋಲನದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಹಿರಿಯ ಮುಖಂಡ ಗೋವಿಂದೇಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ರೈತಸಂಘದ ಮುಖಂಡರಾದ ಚಿಕ್ಕಾಡೆ ಹರೀಶ್, ಜೋಗಿರಾಜೇಗೌಡ, ಕನಗೋನಹಳ್ಳಿ ಪರಮೇಶಗೌಡ, ಲೋಕೇಶ್, ಮಹೇಶ್, ಸೋಮು, ಮೇಲುಕೋಟೆ ದಿಲೀಪ್, ಸುಬ್ಬಣ್ಣ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಗ್ರಾಮ ಆಡಳಿತಾಧಿಕಾರಿ ರಮೇಶ್ ಭಾಗವಹಿಸಿದ್ದರು.
ವಿವಿಧ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ವಾಹನಗಳು ಆಗಮಿಸಿದ್ದವು.

ಸೈಟ್ ಮಾಲೀಕರಿಗೆ ನೋಟಿಸ್ ನೀಡಿ:
ರಾಯಗೋಪುರ ಬೀದಿಯ ಖಾಲಿ ನಿವೇಶನದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಕಸ, ಸೌದೆಗಳನ್ನು ಕಾರ್ಯಕರ್ತರೊಂದಿಗೆ ಸೇರಿ ಶುಚಿಗೊಳಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವೈರಮುಡಿ ಉತ್ಸವ ಪೂರ್ವಸಿದ್ಧತಾ ಸಭೆಯ ನಿರ್ಣಯದಂತೆ ಸೈಟ್ ಮಾಲೀಕರಿಗೆ ನೋಟಿಸ್ ನೀಡಿ ಜೆಸಿಬಿ ತರಿಸಿ ಖಾಲಿ ನಿವೇಶನಗಳಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಗಿಡಗಂಟಿ ಬೆಳೆದಿರುವ ಖಾಲಿ ನಿವೇಶನ ಮಾಲೀಕರಿಗೆ ದಂಡ ಹಾಕಿ ಎಂದು ಪಿಡಿಒಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net