

ನಂಜನಗೂಡು: ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಯ ರಾಯಭಾರಿಗಳಾಗಿದ್ದು, ತಾವು ಓದಿದ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿಗಳು ನೆರವಾಗುವ ಜತೆಗೆ ಕಿರಿಯ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬಹುದಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಹೇಳಿದರು.
ನಗರದ ದೇವೀರಮ್ಮನಹಳ್ಳಿಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರ ಆಶೀರ್ವಾದದೊಂದಿಗೆ ಸ್ಥಾಪನೆಗೊಂಡ ಪ್ರತಿಷ್ಠಿತ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿ, ಆಧ್ಯಾಪಕನಾಗಿ ಸೇವೆ ಸಲ್ಲಿಸಿದ್ದಲ್ಲದೆ ಉತ್ತಮ ಸಂಸ್ಕೃತಿ, ಸಂಸ್ಕಾರ ಹಾಗೂ ಆಚಾರ ವಿಚಾರಗಳನ್ನು ಕಲಿಯಲು ಜೆಎಸ್‌ಎಸ್ ಸಂಸ್ಥೆ ನನಗೆ ನೆರವಾಗಿದೆ. ಹಿರಿಯ ವಿದ್ಯಾರ್ಥಿಗಳು ತಾವು ಶಿಕ್ಷಣ ಕಲಿತ ಕಾಲೇಜಿನೊಂದಿಗೆ ಬಾಂಧವ್ಯ ಹೊಂದಿರುವಂತೆ ನೋಡಿಕೊಳ್ಳುವ ಸಲುವಾಗಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಅಸ್ಥಿತ್ವಕ್ಕೆ ತಂದಿರುವುದಾಗಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಜೆಎಸ್‌ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಡಾ.ಎಚ್.ಪಿ.ಮಂಜುಳಾ ಮಾತನಾಡಿ, ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿ ನಂಜನಗೂಡು ಸಂಸ್ಕೃತಿಕ ಬೀಡು ಎಂಬ ಶೀರ್ಷಿಕೆಯಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದೇನೆ. ಜತೆಗೆ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಲು ಕಾಲೇಜಿನಲ್ಲಿ ಕಲಿತ ಹಲವು ಅಂಶಗಳು ನೆರವಾಗಿವೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್.ಹೊನ್ನೇಗೌಡ ಮಾತನಾಡಿ, ಶಿಕ್ಷಣವೆಂಬ ನೆನಪಿನಂಗಳದಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲ ಒಂದು ಕಡೆ ಸೇರಿ ಸಾಧನೆಯ ಹಾದಿಯಲ್ಲಿ ಸಾಗುವ ಜತೆಗೆ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕಿರಿಯರಿಗೆ ಮಾರ್ಗದರ್ಶನ ಮಾಡಿ ತಾವು ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಯನ್ನು ಸಾರ್ವಕಾಲಿಕವಾಗಿ ಸ್ಮರಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿ ಮುನ್ನಡೆದಾಗ ಮಾತ್ರ ಹಿರಿಯ ವಿದ್ಯಾರ್ಥಿಗಳ ಸಭೆಗೆ ಮಹತ್ವ ಬರುತ್ತದೆ ಎಂದರು. ಈ ಸಂದರ್ಭ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎನ್. ಶಿವಕುಮಾರ್, ಕಚೇರಿ ಅಧಿಕ್ಷಕರಾದ ಕೆ.ವಿ.ಸುಂದರರಾಜು ಸೇರಿದಂತೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.