ನಮಸ್ಕಾರ ನಾನು ಕ್ಯಾಂಡಿಡೇಟು, ರಾಜೀವ್ ಗೌಡ !

IMG-20240401-WA0029
Published on

ಬೆಂಗಳೂರು: ತಂಪುಗಾಳಿ, ನಿಧಾನವಾಗಿ ನೇಸರ ಹೊಳೆಯುತ್ತಿರುವ ಹೊತ್ತಿಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಬೆಳಗಿನ ವಾಯುವಿಹಾರದ ದಿರಿಸು ಧರಿಸಿ, ಕ್ಯಾನ್ವಾಸ್ ಶೂಸ್ ಕಟ್ಟಿಕೊಂಡು, ಕಾಂಗ್ರೆಸ್ ಪಕ್ಷದ ಹೆಗಲು ವಸ್ತ್ರ ಹಾಕಿಕೊಂಡು ಸೋಮವಾರ ಬೀದಿಗಿಳಿದರು.

'ನಮಸ್ಕಾರ ನಾನು, ಕ್ಯಾಂಡಿಡೇಟು ರಾಜೀವಗೌಡ' ಎನ್ನುತ್ತಾ ಎದುರಾದವರೆಡೆ ಮುಗುಳ್ನಗೆ ಬೀರಿ ಕೈಕುಲುಕಿದರು. ಜನರು ಕೂಡ ಹೋ ಗೊತ್ತು ಸರ್ ಎಂದು ಪ್ರತಿ ನಗು ಚೆಲ್ಲಿದರೆ, ಲೋಕಾಭಿರಾಮವಾಗಿ ಮಾತನಾಡಿದ ರಾಜೀವ್ ಗೌಡ ಮತ ಯಾಚನೆ ಮರೆಯಲಿಲ್ಲ‌.

ಸುಬ್ರಮಣ್ಣನಗರ ವಾರ್ಡ್ ನ ಪಾರ್ಕ್ ನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಜತೆಗೆ ತಮ್ಮ ದಿನದ ಕಾರ್ಯಚಟುವಟಿಕೆ ಶುರುವಿಟ್ಟುಕೊಂಡರು. ಪಾರ್ಕ್ ನಲ್ಲಿ ವಾಯು ವಿಹಾರಗಳೊಂದಿಗೆ ಹೆಜ್ಜೆ ಹಾಕುತ್ತಾ ಕುಶಲೋಪರಿ ವಿಚಾರಿಸಿ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿ, ಕಾಂಗ್ರೆಸ್ ಗೆ ಬೆಂಬಲಿಸಲು ಕೋರಿದರು‌.

ಗಮನಸೆಳೆಯಲು ಪ್ರಯತ್ನ

ಪಾರ್ಕ್ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವ ಜನರೊಂದಿಗೆ ಬೆರೆತು ಬ್ಯಾಟ್ ಬೀಸಿದರು. ಹಾಗೆಯೇ ಮಹಿಳೆಯರ ಜತೆ ಬೇಸ್ ಬಾಲ್ ಆಡಿದರು. ರಸ್ತೆ ಪಕ್ಕದಲ್ಲಿ ಕಸಗುಡಿಸುತ್ತಿದ್ದ ಪೌರ ಕಾರ್ಮಿಕರಿಗೆ ಕೈಮುಗಿದರು. ಮುಂದಕ್ಕೆ ಸಾಗಿ ಕ್ಯಾಂಟೀನ್ ನಲ್ಲಿ ಕಾಫಿಯೊಂದಿಗೆ ಹರಟೆ ಹೊಡೆಯುತ್ತಿದ್ದವರ ಜತೆಗೆ ಹರಟೆ ರಾಜಕೀಯ ವಿದ್ಯಮಾನದ ಕುರಿತು ಹರಟೆ ಹೊಡೆದ ರಾಜೀವ್ ಗೌಡ, ತಮ್ಮತ್ತ ಗುಂಪಿನ ಗಮನಸೆಳೆದರು.

ಈ ಸುತ್ತಾಟದಲ್ಲಿ ಸಾಥ್ ನೀಡಿದವರೊಂದಿಗೆ ಮಲ್ಲೇಶ್ವರ ಪಾರ್ಕ್ ನಲ್ಲಿ ಬೆಳಗಿನ ಉಪಾಹಾರ ಮುಗಿಸಿ, ಅದೇ ಬಡಾವಣೆಯ ಮನೆ ಮನೆಗೆ ತೆರಳಿ ಬೆಂಬಲ ಕೋರಿದರು. ಸೂರ್ಯ ಚುರುಕಾಗಿ ನೆಲ ಕಾದು, ಜನರು ದೈನಂದಿನ ಕೆಲಸಕ್ಕೆ ತೆರಳುವ ಮುನ್ನ ರಾಜೀವ್ ಗೌಡ ಬೆಳಗಿನ ಪ್ರಚಾರ ಚಟುವಟಿಕೆಗಳನ್ನು ಪೂರ್ಣಗೊಳಿಸಿದರು.

ಈ ಸಂಧರ್ಭದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅನೂಪ್ ಅಯ್ಯಂಗಾರ್, ಮಾಜಿ ಮೇಯರ್ ಜೆ. ಹುಚ್ಚಪ್ಪನವರು, ಮುಖಂಡರಾದ ಜೆ ಗಿರೀಶ್ ಲಕ್ಕಣ್ಣ, ವಿಜಯ್ ಮುಲಗುಂದ್, ಮಹೇಶ್, ಗೋಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net