ಸಿಇಸಿ ರಾಜೀವ್ ಕುಮಾರ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಲ್ಯಾಂಡಿಂಗ್​ಗೆ ಕಾರಣ ಹೀಗಿದೆ | CEC Rajiv Kumar

Untitled-design-48
Published on

ಡೆಹಾಡ್ರೂನ್​​: ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್(CEC Rajiv Kumar) ಮತ್ತು ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಜೋಗ್ದಂಡ್ ಅವರಿದ್ದ ಹೆಲಿಕಾಪ್ಟರ್ ಬುಧವಾರ (ಅಕ್ಟೋಬರ್​ 16) ಪಿಥೋರಗಢದ ಮುನ್ಸಿಯಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಹೆಲಿಕಾಪ್ಟರ್​​ನಲ್ಲಿ ಸಿಇಸಿ ರಾಜೀವ್​​ ಕುಮಾರ್ ಮತ್ತು ಜೋಗ್ದಂಡ್ ಅವರನ್ನು ಮಿಲಾಮ್ ಗ್ಲೇಸಿಯರ್​​​​ ಕರೆದೊಯ್ಯಲಾಗುತ್ತಿತ್ತು. ತುರ್ತು ಭೂಸ್ಪರ್ಶದ ನಂತರ ಇಬ್ಬರೂ ಅಧಿಕಾರಿಗಳನ್ನು ಹತ್ತಿರದ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಮುನ್ಸಿಯಾರಿಯ ರಾಲಂ ಬಳಿ ಪ್ರತಿಕೂಲ ಹವಾಮಾನದಿಂದಾಗಿ ಈ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಸದ್ಯ ಅವರನ್ನು ಅಲ್ಲಿಂದ ವಾಪಸ್ ಕರೆತರಲು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಹೆಲಿಕಾಪ್ಟರ್ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಈ ಕುರಿತು ಸರ್ಕಾರದ ಕಡೆಯಿಂದ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ವಾಸ್ತವವಾಗಿ ಅಕ್ಟೋಬರ್ 15ರಂದು ರಾಜೀವ್​​ ಕುಮಾರ್ ಅವರು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರು. ಈ ವೇಳೆ ಇವಿಎಂಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಉತ್ತರಿಸಿದರು. ಹರಿಯಾಣ ಚುನಾವಣೆಯಲ್ಲಿ ಇವಿಎಂಗಳಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಪ್ರತಿ ದೂರಿಗೆ ಲಿಖಿತವಾಗಿ ಉತ್ತರಿಸಲಾಗುವುದು ಎಂದು ಹೇಳಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net