

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ(Assembly Election) ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗ (ಇಸಿಐ) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಹಾರಾಷ್ಟ್ರದ ಎಲ್ಲಾ ವಿಧಾನಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಇದೇ ಸಮಯದಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 13ರಂದು ಮೊದಲ ಹಂತದ ಮತದಾನ ನಡೆಯುತ್ತದೆ ಹಾಗೂ ಎರಡನೇ ಹಂತದ ಮತದಾನವು ನವೆಂಬರ್ 20ರಂದು ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಬಹುಮತವು 145 ಆಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 105 ಸ್ಥಾನಗಳನ್ನು ಪಡೆದಿದ್ದರೆ, ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್ 44 ಮತ್ತು ಇತರೆ 29 ಸ್ಥಾನಗಳನ್ನು ಪಡೆದಿತ್ತು.
ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಮುಂಬೈನಲ್ಲಿ ಮತದಾನ ಕೇಂದ್ರಗಳು ಮತ್ತು ಸೌಲಭ್ಯಗಳನ್ನು ಸುಧಾರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 9 ಕೋಟಿ 63 ಲಕ್ಷ ಮತದಾರರಿದ್ದಾರೆ. 4.97 ಕೋಟಿ ಪುರುಷರು, 4.66 ಕೋಟಿ ಮಹಿಳೆಯರು ಮತ್ತು 1.85 ಕೋಟಿ ಯುವ ಮತದಾರರಿದ್ದಾರೆ. 20.93 ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತದಾನ ಮಾಡಬಹುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಬಹುಮತದ ಸಂಖ್ಯೆ 41. 2019ರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 30 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 25 ಸ್ಥಾನ ಪಡೆದಿತ್ತು. 26 ಸ್ಥಾನಗಳು ಇತರೆ ಪಕ್ಷಗಳ ಪಾಲಾಗಿತ್ತು.
ಮೊದಲ ಹಂತದಲ್ಲಿ 43 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 38 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ಒಟ್ಟು 2.6 ಕೋಟಿ ಮತದಾರರಿದ್ದು, ಇದರಲ್ಲಿ ಮಹಿಳಾ ಮತದಾರರೇ ಹೆಚ್ಚು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ 1.6 ಕೋಟಿ ಮಹಿಳಾ ಮತದಾರರಿದ್ದರೆ 1.3 ಕೋಟಿಗೂ ಹೆಚ್ಚು ಪುರುಷ ಮತದಾರರಿದ್ದಾರೆ ಎಂದು ತಿಳಿಸಿದರು.
ಮತಗಟ್ಟೆಯ ಗರಿಷ್ಠ ಅಂತರ ಎರಡು ಕಿಲೋಮೀಟರ್‌ಗಿಂತ ಹೆಚ್ಚಿರುವುದಿಲ್ಲ. ವಯಸ್ಸಾದ ಮತದಾರರು ಮನೆಯಿಂದಲೇ ಮತ ಚಲಾಯಿಸುವ ಸೌಲಭ್ಯವನ್ನು ಹೊಂದಿರುತ್ತಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಏಜೆನ್ಸೀಸ್)