ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ, ಪರ್ಯಾಯ ಮಾರ್ಗ

Hebbala-flyover-Bundh
Published on
ಬೆಂಗಳೂರು: ಕೆ.ಆರ್.ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಾಗುವ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ್ಯಾಂಪ್ ಗಳನ್ನು ನಿರ್ಮಿಸುವ ಯೋಜನೆಯನ್ನು ಬಿಡಿಎ ಕೈಗೊಂಡಿದ್ದು, ತಾತ್ಕಾಲಿಕವಾಗಿ ಸಂಚಾರ ಮಾರ್ಗ ಮಾರ್ಪಡಿಸಲಾಗಿದೆ.
ಸಂಚಾರ ಪೊಲೀಸರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಕಾಮಗಾರಿ ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀಟರ್ ಉದ್ದದ 7 ಉಕ್ಕಿನ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಶನಿವಾರದಿಂದ ಮೇ 21ರ ವರೆಗೆ ಪ್ರತಿದಿನ ತಡರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಗಳ ಕಾಲ ಕಾಮಗಾರಿ ನಡೆಯಲಿದೆ. ಸಾರ್ವಜನಿಕರ ಸುಗಮ ಸಂಚಾರ ಸಲುವಾಗಿ ಕಾಮಗಾರಿ ನಡೆಯುವ ವೇಳೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ರಾತ್ರಿ 12 ಕಡೆಯಿಂದ ಬೆಳಗಿನ ಜಾವ 3 ಗಂಟೆವರೆಗೆ ಎಲ್ಲ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿ ಇರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ರಸ್ತೆ ಮಾರ್ಗವಾಗಿ ಚಲಿಸಬಹುದು. ಕುವೆಂಪು ವೃತ್ತದಲ್ಲಿ ಎಡತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net