ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್​ ಘೋಷಣೆ

Rains
Published on

ಬೆಂಗಳೂರು: ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ ಕೃಪೆ ತೋರಿದ್ದು, ಕಳೆದ ಕೆಲ ದಿನಗಳಿಂದ ಆಗುತ್ತಿರುವ ಮಳೆ ಜನರಲ್ಲಿ ಸಂತಸ ತಂದಿದೆ. ಆದರೆ, ಕೆಲವೆಡೆ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಹಲವೆಡೆ ಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು (ಮೇ 09) ಕೂಡ ಭಾರೀ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಗುಡುಗು ಸಹಿತ 40 ರಿಂದ 50 ಕೀ.ಮಿ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬರಲಿದ್ದು, ಎಚ್ಚರವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 17 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

mysore

ಗುರುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಅದರಂತೆ ಬಳ್ಳಾರಿ, ತುಮಕೂರು, ಚಿತ್ರದುರ್ಗ, ಬೆಂಗಳೂರು, ಕೋಲಾರ, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ಮೇ 10 ರಂದು ಬೀದರ್, ಬೆಳಗಾವಿ, ವಿಜಯನಗರ, ಧಾರವಾಡ, ಶಿವಮೊಗ್ಗ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರು, ಮೈಸೂರು, ತುಮಕೂರು, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯಾಗಲಿದೆ. ಮೇ 13 ರಿಂದ ಮೇ 15ರವರೆಗೆ ಬೀದರ್, ಬೆಳಗಾವಿ, ಕಲಬುರ್ಗಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ದಾವಣಗೆರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net