ಚೀನಾದಲ್ಲಿ ಭಾರಿ ಮಳೆ..ಹೆದ್ದಾರಿ ಕುಸಿದು 48 ಜನರು ಮೃತ್ಯು!

china
Published on

ಬೀಜಿಂಗ್‌: ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿದಿದ್ದು, ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಭಾರೀ ಮಳೆಯಿಂದಾಗಿ ಮೀಝೌ ನಗರದಿಂದ ಡಾಬು ಕೌಂಟಿಯ ಕಡೆಗೆ ಚಲಿಸುವ ರಸ್ತೆ ಕುಸಿತ ಕಂಡಿದೆ. ಕಾರು ಮತ್ತಿತರ ವಾಹನಗಳು ಕೆಸರಿನಲ್ಲಿ ಸಿಲುಕಿ ಸುಮಾರು 59 ಕೆಳಕ್ಕೆ ಕಡಿದಾದ ಇಳಿಜಾರಿನಲ್ಲಿ ಬಿದ್ದಿವೆ. 20 ಕ್ಕೂ ಹೆಚ್ಚು ಕಾರುಗಳು ರಸ್ತೆ ಕುಸಿತವಾಗುತ್ತಿದ್ದಾಗ ಕೆಳಕ್ಕೆ ಬಿದ್ದಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಕೈಗಾರಿಕಾ ಪ್ರದೇಶವಾದ ಗುವಾಂಗ್‌ಡಾಂಗ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸದಾ ಹೆಚ್ಚು ವಾಹನ ಸಂಚಾರದಿಂದ ಕೂಡಿರುತ್ತವೆ. ಮೂರ್ನಾಲ್ಕು ವಾರಗಳಿಂದ ಭಾರಿ ಮಳೆ ಸುರಿದ ಪರಿಣಾಮ ಗುರುವಾರ ಹೆದ್ದಾರಿ ಕುಸಿತ ಕಂಡಿದೆ.

ದುರ್ಘಟನೆಯಲ್ಲಿ 36 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮೃತರ ಸಂಖ್ಯೆ 48 ಕ್ಕೆ ಏರಿದೆ.

ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಮೀಝೌ ನಗರದ ಮೇಯರ್ ವಾಂಗ್ ಹುಯಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂತ್ರಸ್ತರಲ್ಲಿ ಯಾವುದೇ ವಿದೇಶಿಗರು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net