ಮುಂಗಾರು ಮಾರುತ, ಉತ್ತರ ಕರ್ನಾಟಕ ಮೊರೆತ

state-1
Published on

ಬೆಂಗಳೂರು: ರಾಜ್ಯದಲ್ಲಿ ಎರಡ್ಮೂರು ದಿನ ಬಿಡುವು ನೀಡಿದ್ದ ಮುಂಗಾರು ಭಾನುವಾರ ಮತ್ತೆ ಬಲಪಡೆದುಕೊಂಡಿದ್ದು, ಉತ್ತರ ಕರ್ನಾಟಕ ಭಾಗದ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವರುಣಾರ್ಭಟ ತಗ್ಗಿದ್ದು ಅಲ್ಲಲ್ಲಿ ಸಾಧಾರಣ ಮಳೆ ಸುರಿದಿದೆ. ಬೆಳಗಾವಿ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಮತ್ತೆ ಉಕ್ಕಿ ಹರಿಯುತ್ತಿದ್ದು ಕೃಷಿ ಭೂಮಿಗಳೆಲ್ಲ ಜಲಾವೃತಗೊಂಡಿವೆ. ನದಿತಟದ ವಾಸಿಗರು ಜನ-ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತಗಳು ಸೂಚಿಸಿವೆೆ.

ಮಲೆನಾಡಿನಲ್ಲಿ ವರ್ಷಧಾರೆ: ಮಲೆನಾಡಿನಲ್ಲಿ ವಾರದಿಂದ ಬಿಡುವು ನೀಡಿದ್ದ ಮಳೆ ಭಾನುವಾರ ಬೆಳಗ್ಗೆಯಿಂದಲೇ ಬಹುತೇಕ ಕಡೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ, ಉಳಿದೆಡೆ ಸಾಧಾರಣ ಮಳೆ ಬಿದ್ದಿದೆ. ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದೆ.

ಮಳೆಯಲ್ಲಿ ಮಿಂದೆದ್ದ ಹುಬ್ಬಳ್ಳಿ- ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಸೇತುವೆ ಜಲಾವೃತವಾಗಿದೆ. ಅನೇಕ ಕಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತುಪ್ಪರಿ ಹಳ್ಳದ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು ಧಾರವಾಡ- ಸವದತ್ತಿ ಮಾರ್ಗದ ಸೇತುವೆ ಜಲಾವೃತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ವಾಣಿಜ್ಯನಗರಿ ಸ್ತಬ್ಧಗೊಂಡಿದೆ. ಹವಾಮಾನ ವೈಪರೀತ್ಯದ ಕಾರಣ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಇಳಿಯಬೇಕಿದ್ದ ಇಂಡಿಗೊ ವಿಮಾನ ಅಂದಾಜು ಒಂದೂವರೆ ತಾಸು ಆಕಾಶದಲ್ಲೇ ಗಿರಕಿ ಹೊಡೆದು ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ವಾಡಿಕೆಗಿಂತ ಶೇ.6 ಹೆಚ್ಚು ಮಳೆ:ರಾಜ್ಯಾದ್ಯಂತ ಎರಡೂವರೆ ತಿಂಗಳಲ್ಲಿ ವಾಡಿಕೆಗಿಂತ ಶೇ. 6 ಹೆಚ್ಚು ಮಳೆ ಆಗಿದೆ. ಜೂ.1ರಿಂದ ಆ.15ರವರೆಗೆ 594 ಮಿಮೀ ಮಳೆಯಾಗಬೇಕಿತ್ತು. 630 ಮಿಮೀ ಮಳೆ ಸುರಿದಿದೆ. ಆದರೂ, ಮಲೆನಾಡಲ್ಲಿ ಶೇ.16 ಹಾಗೂ ಕರಾವಳಿಯಲ್ಲಿ ಶೇ.3 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿ ನಲ್ಲಿ ಶೇ.64 ಹಾಗೂ ಉತ್ತರ ಒಳನಾಡಿನಲ್ಲಿ ಶೇ.32 ಹೆಚ್ಚು ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

21ಕ್ಕೆ ಕಾವೇರಿಗೆ ಯಡಿಯೂರಪ್ಪ ಬಾಗಿನ:  ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಬಾಗಿನ ಸಲ್ಲಿಕೆಗೆ ಆ.21ರಂದು ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದು ಬಾಗಿನ ಅರ್ಪಿಸಲಿದ್ದಾರೆ. ಕಾವೇರಿ ಮಾತೆಗೆ ಈವರೆಗೆ ನಾಲ್ಕು ಬಾರಿ ಬಾಗಿನ ಅರ್ಪಿಸಿರುವ ಸಿಎಂ ಯಡಿಯೂರಪ್ಪ, ಈ ವರ್ಷ ಐದನೇ ಬಾರಿಗೆ ಬಾಗಿನ ಸಮರ್ಪಿಸುವ ಮೂಲಕ ಹೆಚ್ಚು ಬಾರಿ ಅರ್ಪಿಸಿದ ದಾಖಲೆ ನಿರ್ವಿುಸಲಿದ್ದಾರೆ. 124.80 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಭಾನುವಾರ ಸಂಜೆ ವೇಳೆಗೆ 124.70 ಅಡಿ ನೀರಿನ ಸಂಗ್ರಹವಾಗಿತ್ತು. 8758 ಕ್ಯೂಸೆಕ್ ಒಳಹರಿವಿದ್ದರೆ, 5318 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿತ್ತು.

ಉಕ್ಕಿ ಹರಿಯುತ್ತಿದೆ ಮಲಪ್ರಭಾ: ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಾವೇರಿ ಜಿಲ್ಲೆಯ ನವಿಲು ತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿ ಮಲಪ್ರಭಾ ನದಿಗೆ 15 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಗದಗ ಜಿಲ್ಲೆ ನರಗುಂದದ ಲಖಮಾಪೂರ ಗ್ರಾಮ ನಡುಗಡ್ಡೆಯಂತಾಗಿದೆ. ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಕ್ಷಣ ಕ್ಷಣಕ್ಕೂ ಪ್ರವಾಹದ ಅಬ್ಬರ ಹೆಚ್ಚುತ್ತಿದೆ. ಇದರ ಮಧ್ಯೆ ವ್ಯವಸ್ಥಿತ ಬೆಳ್ಳೇರಿ ಡಿಪ್ಲೊಮಾ ಮಹಾವಿದ್ಯಾಲಯಕ್ಕೆ ತೆರಳಲು ಗ್ರಾಮಸ್ಥರು ನಿರಾಕರಿಸಿದ್ದಾರೆ.

14 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ 3 ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ.17ರಿಂದ 19ರವರೆಗೆ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿಯಲ್ಲಿ ಆ.17ರಂದು ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ: ಉತ್ತರ ಕನ್ನಡದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕದ್ರಾ ಅಣೆಕಟ್ಟೆಯ ಗೇಟ್​ಗಳನ್ನು ತೆರೆದು 27,200 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವಾರ ನಿರಂತರವಾಗಿ 30 ಸಾವಿರ ಕ್ಯೂಸೆಕ್​ಗೂ ಹೆಚ್ಚು ನೀರನ್ನು ಬಿಟ್ಟು ಗೇಟ್ ಬಂದ್ ಮಾಡಲಾಗಿತ್ತು. ಆ.9ರವರೆಗೆ 115 ಮಿಮೀವರೆಗೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಳೆನಾಡಾದ ಬಿಸಿಲೂರುಗಳು

ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳು ಅಕ್ಷರಶಃ ಮಲೆನಾಡಾಗಿ ಮಾರ್ಪಟ್ಟಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ದಟ್ಟನೆ ಮೋಡಕವಿದ ವಾತಾವರಣ ಮತ್ತು ಮಳೆಯಾಗುತ್ತಿದ್ದರಿಂದ ಭಾನುವಾರ ಬೆಂಗಳೂರಿನಿಂದ ಕಲಬುರಗಿ ಏರ್​ಪೋರ್ಟ್​ಗೆ ಬಂದಿದ್ದ ಎರಡು ವಿಮಾನಗಳಿಗೆ ಲ್ಯಾಂಡಿಂಗ್ ಸಾಧ್ಯವಾಗದೆ ಸುಮಾರು ಹೊತ್ತು ಆಗಸದಲ್ಲೇ ರೌಂಡ್ ಹೊಡೆದಿದ್ದು, ಒಂದು ಬೆಂಗಳೂರಿಗೆ ಮರಳಿದರೆ, ಇನ್ನೊಂದು ಹೈದರಾಬಾದ್​ನಲ್ಲಿ ಲ್ಯಾಂಡ್ ಆಗಿದೆ. ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲೂ 2 ದಿನದಿಂದ ಮಳೆ ಸುರಿಯುತ್ತಿದೆ.

ಟಿಬಿ ಭರ್ತಿಗೆ ಕ್ಷಣಗಣನೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ 5 ಸಾವಿರದಿಂದ 50 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಬಹುದಾಗಿದೆ. ಆಲಮಟ್ಟಿ ಜಲಾಶಯದಿಂದ 1,96,440 ಕ್ಯೂಸೆಕ್​ಗೂ ಅಧಿಕ ನೀರು ಹರಿದು ಬರುತ್ತಿರುವುದರಿಂದ 18 ಕ್ರಸ್ಟ್ ಗೇಟ್ ತೆರೆದು ಕೃಷ್ಣಾ ನದಿಗೆ ಅಷ್ಟೇ ಪ್ರಮಾಣ ನೀರು ಹೊರ ಹರಿಸಲಾಗುತ್ತಿದ್ದು, ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net