Gujarat lion viral video: ಗುಜರಾತ್‌ನಲ್ಲಿ ಭಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಆರು ಸಿಂಹಗಳ ಕುಟುಂಬವೊಂದು ಮನೆಯ ಮೇಲ್ಛಾವಣಿಯನ್ನೇ ಆಶ್ರಯ ಮಾಡಿಕೊಂಡಿರುವ ಅಪರೂಪದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ತಾಲ್ಲೂಕಿನ ಝುಡ್ವಡಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಗಂಡು ಸಿಂಹ, ಮೂರು ಹೆಣ್ಣು ಸಿಂಹಗಳು ಹಾಗೂ ಎರಡು ಮರಿಗಳು ಸೇರಿ ಒಟ್ಟು ಆರು ಸಿಂಹಗಳು ಗ್ರಾಮದ ತೋಟದ ಮನೆಯೊಂದರ ಮೇಲ್ಛಾವಣಿಯಲ್ಲಿ ಕುಳಿತಿದ್ದವು. ಮಳೆಯಿಂದ ತಪ್ಪಿಸಿಕೊಳ್ಳಲು ಒಣ ಹಾಗೂ ಎತ್ತರದ ಜಾಗ ಹುಡುಕಿಕೊಂಡು ಸಿಂಹಗಳು ಮೇಲ್ಛಾವಣಿಗೆ ಬಂದಿದ್ದವು ಎನ್ನಲಾಗಿದೆ.
ಮಾಹಿತಿ ಪ್ರಕಾರ, ರಾತ್ರಿ ಬೇಟೆಯಾಡಿದ ಬಳಿಕ ಹಗಲಿನಲ್ಲಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸಿಂಹಗಳು ಹಲವು ಗಂಟೆಗಳ ಕಾಲ ಮೇಲ್ಛಾವಣಿಯಲ್ಲೇ ಕುಳಿತು ವಿಶ್ರಾಂತಿ ಪಡೆದಿವೆ. ಸಿಂಹಗಳ ಈ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ಗಿರ್ ರಾಷ್ಟ್ರೀಯ ಉದ್ಯಾನವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಷ್ಯಾಟಿಕ್ ಸಿಂಹಗಳ ಓಡಾಟ ಸಾಮಾನ್ಯವಾಗಿದೆ. ಭಾರಿ ಮಳೆಯಂತಹ ಸಂದರ್ಭಗಳಲ್ಲಿ ಒಣ ಹಾಗೂ ಎತ್ತರದ ಜಾಗ ಹುಡುಕುತ್ತಾ ಸಿಂಹಗಳು ಕೆಲವೊಮ್ಮೆ ಜನವಸತಿ ಪ್ರದೇಶಗಳತ್ತ ಬರುವುದೂ ಸಾಮಾನ್ಯ. (ಏಜೆನ್ಸೀಸ್)