‘ಎಫ್‌ಐಆರ್‌ಗೆ ಇಷ್ಟು ತಡವೇಕೆ?’; ಆಂಧ್ರ ಪೊಲೀಸರಿಗೆ ಸುಪ್ರೀಂ ಕೋರ್ಟ್ ಚಾಟಿ | Sai Krishna custodial death

ಸಾಯಿ ಕೃಷ್ಣ ಕಸ್ಟಡಿ ಸಾವು ಮತ್ತು ನಾಪತ್ತೆ ಪ್ರಕರಣದಲ್ಲಿ ಎಫ್‌ಐಆರ್ ವಿಳಂಬ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿರುವುದು ಹಾಗೂ ಸಿಸಿಟಿವಿ ದೃಶ್ಯ ಅಳಿಸಿದ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ಆಂಧ್ರ ಪೊಲೀಸರನ್ನು ಪ್ರಶ್ನಿಸಿದೆ.
Sai Krishna custodial death
ಕಸ್ಟಡಿಯಲ್ಲಿ ಸಾಯಿ ಕೃಷ್ಣ ಸಾವು: ಆಂಧ್ರ ಪೊಲೀಸರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
Published on
Summary

ಸಾಯಿ ಕೃಷ್ಣ ಕಸ್ಟಡಿ ಸಾವು ಪ್ರಕರಣದಲ್ಲಿ ಸುಪ್ರೀಂ ಹಸ್ತಕ್ಷೇಪ

ಎಫ್‌ಐಆರ್ ತಡವಾಗಿದ್ದೇಕೆ ಎಂದು ಆಂಧ್ರ ಪೊಲೀಸರಿಗೆ ಪ್ರಶ್ನೆ

ಸಿಸಿಟಿವಿ ದೃಶ್ಯಗಳನ್ನು ಅಳಿಸಿದ ಆರೋಪದ ಬಗ್ಗೆ ವಿಚಾರಣೆ

Sai Krishna custodial death: ವಿಜಯವಾಡದ ಸಾಯಿ ಕೃಷ್ಣ ಕಸ್ಟಡಿ ಸಾವು ಹಾಗೂ ನಾಪತ್ತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಂಧ್ರ ಪೊಲೀಸರನ್ನು ಪ್ರಶ್ನಿಸಿದೆ. ಎಫ್‌ಐಆರ್ ವಿಳಂಬ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿರುವುದು ಹಾಗೂ ಸಿಸಿಟಿವಿ ದೃಶ್ಯ ಅಳಿಸಿದ ಆರೋಪಗಳ ಬಗ್ಗೆ ನ್ಯಾಯಾಲಯ ಮಾಹಿತಿ ಕೇಳಿದೆ.

ಮೂರು ನ್ಯಾಯಮೂರ್ತಿಗಳ ಪೀಠವು ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ಸಂಬಂಧಿತ ವಿಚಾರಣೆಗೆ ತಡೆ ನೀಡಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೆಪ್ಟೆಂಬರ್ 30ರೊಳಗೆ ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 12ರಂದು ನಡೆಯಲಿದೆ.

ಕೇಸ್​ನ ತನಿಖೆ ಕೆಳಹಂತದ ಪೊಲೀಸ್ ಸಿಬ್ಬಂದಿಯ ಮೇಲಷ್ಟೇ ಕೇಂದ್ರೀಕೃತವಾಗಿದೆಯೇ? ಹಿರಿಯ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ಏಕೆ ಪರಿಶೀಲಿಸಿಲ್ಲ? ಎಂಬ ಪ್ರಶ್ನೆಯನ್ನೂ ಸುಪ್ರೀಂ ಕೋರ್ಟ್ ಮುಂದಿಟ್ಟಿದೆ. ಸಂಬಂಧಿತ ಅರ್ಜಿಗಳಲ್ಲಿ ಸಿಬಿಐಯನ್ನೂ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಮೇ ತಿಂಗಳಲ್ಲಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸುವ ವೇಳೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಸಾಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ಕೃಷ್ಣಲಂಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿರಲಿಲ್ಲ. ಈ ಪ್ರಕರಣದಲ್ಲಿ ರಾಜ್ಯ ಎಸ್‌ಐಟಿ ಈಗಾಗಲೇ ಏಳು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: ಕಾವಿ, ರುದ್ರಾಕ್ಷಿ ಧರಿಸಿದ ಮಹಿಳೆಯ ವಿಚಿತ್ರ ವರ್ತನೆ; ಹಣ ಎಸೆದು, ಅಭಿಷೇಕ ಮಾಡಿದ ಭಕ್ತರು! ವೈರಲ್ ವಿಡಿಯೋ | Viral video

ಎಸ್‌ಐಟಿ ತನಿಖೆಯಲ್ಲಿ ಸಾಯಿ ಕೃಷ್ಣ ಅವರನ್ನು ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿ, ಬಳಿಕ ನಿರ್ಜನ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದು, ನಂತರ ಮೃತದೇಹವನ್ನು ದಹನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net