ರಾಜಧಾನಿಯಲ್ಲಿ ವರುಣನ ಅಬ್ಬರ; ರಾಜ್ಯದಲ್ಲಿ ಮಳೆ ಅವಾಂತರಕ್ಕೆ 10 ಸಾವು

ವಿಜಯವಾಣಿ (6)
Published on
  • 7 ವರ್ಷದ ಬಳಿಕ ದಾಖಲೆ | ನಿಕೋಬಾರ್​ನಲ್ಲಿ ಭಾರಿ ಮಳೆ
  • ಕೇರಳದತ್ತ ಮಳೆ ಮಾರುತ | ಉತ್ತಮ ವರ್ಷಧಾರೆ ನಿರೀಕ್ಷೆ

ಬಂತು ಮಾನ್ಸೂನ್ ಮಾರುತ

ನವದೆಹಲಿ: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ದೇಶದ ಜನತೆ ಮೇಲೆ ವರುಣದೇವ ಕೃಪೆ ತೋರಿದ್ದಾನೆ. ನೈಋತ್ಯ ಮಾನ್ಸೂನ್ ಮಾರುತಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಕೆಲವು ಪ್ರದೇಶಗಳಿಗೆ ನಿಗದಿತ ಅವಧಿಗಿಂತ ಒಂದು ವಾರ ಮೊದಲೇ ಪ್ರವೇಶಿಸಿವೆ. ಪ್ರಸಕ್ತ ವರ್ಷದ ಮುಂಗಾರು ಅವಧಿ 7 ವರ್ಷದಲ್ಲೇ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆ ಪ್ರಕಾರ ದಕ್ಷಿಣ ಅಂಡಮಾನ್ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್​ನಲ್ಲಿ ಸಾಮಾನ್ಯವಾಗಿ ಮೇ 21 ರಂದು ಮಾನ್ಸೂನ್ ಅರಂಭವಾಗುತ್ತದೆ. ಆದರೆ ಈ ಬಾರಿ ಮೇ 13 ರಂದೇ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್​ನ ಹಲವು ಭಾಗಗಳಲ್ಲಿ ಮಾನ್ಸೂನ್ ಪ್ರವೇಶಿಸಿದೆ. ಮುಂದಿನ ಮೂರು ನಾಲ್ಕು ದಿನ ದಕ್ಷಿಣ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳು ಸೇರಿದಂತೆ ಅಂಡಮಾನ್ ಪ್ರದೇಶದಲ್ಲಿ ಮಳೆಯಾಗಲು ಅನುಕೂಲಗಳ ಪರಿಸ್ಥಿತಿಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ಮಾನ್ಸೂನ್ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದ್ದು, ಶೇ. 105 ರಷ್ಟು ಇರಲಿದೆ. ಮಳೆಯ ಪ್ರಮಾಣ ಸರಾಸರಿ 880 ಮಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಸಾಮಾನ್ಯವಾಗಿ ಮೇ 20ರ ನಂತರ ಅಂಡಮಾನ್, ನಿಕೋಬಾರ್ ಭಾಗದಲ್ಲಿ ಮುಂಗಾರು ಮಾರುತ ಕಳೆಗಟ್ಟುತ್ತಿದ್ದವು. ಈ ಬಾರಿ ವಾರಕ್ಕೆ ಮೊದಲು ಆಗಮಿಸಿದೆ. ಮುಂದಿನ ಮೂರ್ನಾಲ್ಕು ದಿನ ಬಂಗಾಳ ಕೊಲ್ಲಿ ಕೇಂದ್ರ ಭಾಗ ಆವರಿಸುವ ಮಾರುತ ಸಂಪೂರ್ಣವಾಗಿ ಬಂಗಾಳ ಕೊಲ್ಲಿ ಸುತ್ತುವರಿದು ಅರಬ್ಬಿ ಸಮುದ್ರದ ಕಡೆಗೆ ಚಲಿಸಲಿದೆ.

ಉತ್ತಮ ಮಳೆ ನಿರೀಕ್ಷೆ: ಈ ವರ್ಷ ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆ ಸುರಿಸಲಿದೆ ಎಂದು ಈಗಾಗಲೇ ಐಎಂಡಿ ಮುನ್ಸೂಚನೆ ನೀಡಿದೆ. ಕೃಷಿ ವಲಯದ ಆಧಾರಸ್ಥಂಭವಾಗಿರುವ ಮುಂಗಾರು ದೇಶದ ಶೇ.42 ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಜತೆಗೆ ದೇಶದ ಜಿಡಿಪಿಗೆ ಶೇ.18 ಕೊಡುಗೆ ನೀಡುತ್ತದೆ.

ದಕ್ಷಿಣಕ್ಕೆ ಯಾವಾಗ?

ಸಾಮಾನ್ಯವಾಗಿ ಜೂ.1ರಂದು ಮುಂಗಾರು ಕೇರಳ ಪ್ರವೇಶಿಸುತ್ತದೆ. ಆದರೆ ಈ ವರ್ಷ ಮುಂಗಾರು ಮಾರುತ ಮೇ 27ರ ಹೊತ್ತಿಗೆ ಕೇರಳ ಆವರಿಸಬಹುದೆಂದು ಹವಾಮಾನ ಇಲಾಖೆ ಹೇಳಿತ್ತು. ಈಗಿನ ಬೆಳವಣಿಗೆಯಿಂದಾಗಿ ಅವಧಿಗೂ ಮೊದಲೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಒಟ್ಟು 10 ಮಂದಿ ಬಲಿ

ಬೆಂಗಳೂರು: ಮುಂಗಾರು ಮಾರುತ ಪ್ರವೇಶಿಸುವ ಮೊದಲೇ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ರಾಜಧಾನಿಯ ಹಲವೆಡೆ ಒಂದು ತಾಸು ಮಳೆ ಸುರಿಯಿತು. ರಾಜ್ಯದ ವಿವಿಧೆಡೆ ಪ್ರತ್ಯೇಕ ಘಟನೆಗಳಲ್ಲಿ 10 ಮಂದಿ ಬಲಿಯಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಬೈಕ್ ಸವಾರನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.

ಮಲೆನಾಡಿನಲ್ಲೂ ಮಳೆ ಆರ್ಭಟಿಸಿದೆ. ಶಿವಮೊಗ್ಗ, ಸಾಗರ, ಹೊಸನಗರ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ಶಿವಮೊಗ್ಗ ನಗರ, ಆನಂದಪುರದಲ್ಲಿ ಸುರಿದ ಮಳೆ ವಾತಾವರಣ ತಣ್ಣಗಾಗಿಸಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ಕೊಪ್ಪ, ಬಾಳೆಹೊನ್ನೂರು ಮುಂತಾದೆಡೆ ವರುಣ ಅಬ್ಬರಿಸಿದ್ದಾನೆ. ಮುಂಗಾರುಪೂರ್ವ ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದು ಕೃಷಿ ಚಟುವಟಿಕೆಯನ್ನು ಶುರು ಮಾಡಿದ್ದಾರೆ.

ಉತ್ತರದಲ್ಲೂ ಆರ್ಭಟ: ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ವರುಣನ ದರ್ಶನವಾಯಿತು. ಕೆಲವು ಪ್ರದೇಶದಲ್ಲಿ ವರುಣಾರ್ಭಟ ನಡೆದರೆ ಮತ್ತೆ ಕೆಲವೆಡೆ ಗುಡುಗು, ಮಿಂಚು ಸಮೇತ ಮಳೆ ಅಬ್ಬರಿಸಿದೆ. ಮುಧೋಳ ತಾಲೂಕಿನ ಲೋಕಾಪುರ ಬಳಿಯ ಪಾಲ್ಕಿಮನಿಯಲ್ಲಿ ಸಿಡಿಲಿನ ಹೊಡೆತಕ್ಕೆ ಮನೆಗೆ ಹಾನಿಯಾಗಿದೆ. ಮನೆ ಪತ್ರಾಸ್ ಪೂರ್ಣ ಹಾರಿ ಹೋಗಿದ್ದು, ಮನೆಯಲ್ಲಿನ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿದ್ದ ಮಹಿಳೆ ಗಾಯಗೊಂಡಿದ್ದಾರೆ.

ಎಲ್ಲೆಲ್ಲಿ ಜನರ ಸಾವು?: ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಬೀರಪ್ಪ ನಾಗಪ್ಪ (45) ಮತ್ತು ಸುನೀಲ ಶೇಷಣ್ಣ (26) ಸಿಡಿಲಿಗೆ ಬಲಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net