ಮೂಲ್ಕಿಯಲ್ಲಿ ಗುಡುಗು ಸಹಿತ ಭಾರಿ ಮಳೆ

ಬಪ್ಪನಾಡು ದೇವಸ್ಥಾನದ ಎದುರು ಭಾಗದಲ್ಲಿ ಚರಂಡಿ ಸ್ಲ್ಯಾಬ್ ತುಂಡಾಗಿರುವುದು.
ಬಪ್ಪನಾಡು ದೇವಸ್ಥಾನದ ಎದುರು ಭಾಗದಲ್ಲಿ ಚರಂಡಿ ಸ್ಲ್ಯಾಬ್ ತುಂಡಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಪ್ಪನಾಡು ದೇವಸ್ಥಾನದ ಒಳಗಡೆ ನೀರು
  • ಸವಾರರಿಗೆ, ಪಾದಚಾರಿಗಳಿಗೆ ಅಪಾಯ
ಮೂಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲ ಕಡೆ ಕೃತಕ ನೆರೆ ಹಾಗೂ ಹಾನಿ ಸಂಭವಿಸಿದೆ.
ಬಪ್ಪನಾಡು ದೇವಸ್ಥಾನದ ಒಳಗಡೆ ಮಳೆ ನೀರು ಬಂದು ಭಕ್ತರಿಗೆ ತೀವ್ರ ತೊಂದರೆಯಾಯಿತು. ಬಪ್ಪನಾಡು ದೇವಸ್ಥಾನದ ಎದುರು ಪೂರ್ವಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಹಾದುಹೋಗುವ ಕಾರಣ, ಅಲ್ಲಿರುವ ಸ್ವಾಗತ ದ್ವಾರ ಸ್ಥಳಾಂತರ ಕಾರ್ಯ ನಡೆಯುತ್ತಿರುವ ಕಾರಣ ದೇವಳ ರಸ್ತೆಯನ್ನು ಬಂದ್ ಮಾಡಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ಅಲ್ಲಿ ತೋಡಿಗೆ ಹಾಕಲಾದ ಸ್ಲ್ಯಾಬ್ ತುಂಡಾಗಿ ಬೃಹದಾಕಾರದ ರಂಧ್ರ ಉಂಟಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ.
ಭಾರೀ ಮಳೆ ಗಾಳಿಗೆ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರದ ಆವರಣ ಗೋಡೆ ಕುಸಿತ ಉಂಟಾಗಿ ಭಾರಿ ನಷ್ಟ ಸಂಭವಿಸಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಪಡುಪಣಂಬೂರು, ಅತಿಕಾರಿಬೆಟ್ಟು, ಕಿಲ್ಪಾಡಿ ಪರಿಸರದಲ್ಲಿ ಶನಿವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿಮಳೆ, ಗಾಳಿಗೆ ಅಪಾರ ಹಾನಿಯಾಗಿದೆ.

ರಸ್ತೆಗೆ ಬಿದ್ದ ಬೃಹದಾಕಾರದ ಮರ

ಭಾರಿ ಮಳೆ, ಗಾಳಿಗೆ ಶಿಮಂತೂರು ದೇವಸ್ಥಾನದ ಸಂಪರ್ಕ ರಸ್ತೆಯ ರೈಲ್ವೇ ಟ್ರ್ಯಾಕ್ ಬಳಿ ಬೃಹದಾಕಾರದ ಹಾಳೆ ಮರ ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಉರುಳಿ ರಸ್ತೆ ತಡೆ ಉಂಟಾಯಿತು. ವಾಹನ ಸವಾರರು ಸುತ್ತು ಬಳಸಿ ಸಂಚಾರ ನಡೆಸಿದರು. ಮರ ವಿದ್ಯುತ್ ತಂತಿ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮೂಲ್ಕಿ ಕುಬೆವೂರು, ಶಿಮಂತೂರು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಕೂಡಲೇ ಸ್ಥಳೀಯರಾದ ಅಶ್ವಿನ್ ಆಳ್ವ ನೇತೃತ್ವದಲ್ಲಿ ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net