

ಬೆಂಗಳೂರು: ರಣಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದ ಬೆಂಗಳೂರಿಗರಿಗೆ ವರುಣನು ತಂಪೆರೆದಿದ್ದು ನಗರದ ಹಲವು ಕಡೆ ಬಿರುಗಾಳಿ ಸಮೇತ ಮಳೆ ಶುರುವಾಗಿದೆ.
ಮೇ 6 ರಿಂದ ನಗರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮಹಾನಗರದ ಯಶವಂತಪುರ, ವಿಧಾನಸೌಧ, ಕೆ.ಆರ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್, ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸೇರಿ ಹಲವೆಡೆ ಆಲಿಕಲ್ಲು ಜೊತೆಗೆ ಭರ್ಜರಿ ಮಳೆಯಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ಸುತ್ತಮುತ್ತ ಕೂಡ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ವಣಕನಹಳ್ಳಿ, ಸೋಲೂರು ಗೊಮ್ಮಾಳಾಪುರ, ಭಾಗದಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಆನೇಕಲ್ ಅತ್ತಿಬೆಲೆ ಚಂದಾಪುರ ಜಿಗಣಿ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಮಳೆಯಾಗುತ್ತಿದೆ. ಬಿಸಿಲ ಬೇಗೆಗೆ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ದಿಢೀರ್ ಸುರಿದ ಮಳೆಯಿಂದ ಅಲ್ಲಲ್ಲಿ ಜನ ಪರದಾಟ ಅನುಭವಿಸಿದ್ದಾರೆ.