

ಕಲಬುರಗಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಬಹಿರ್ದೆಸೆಗೆ ಹೋಗಿದ್ದ ಯುವಕರಿಬ್ಬರ ಪೈಕಿ ಒಬ್ಬ ಜನರ ಕಣ್ಣೆದುರೇ ಭಾನುವಾರ ಬೆಳಗ್ಗೆ ಜಲಸಮಾಧಿಯಾದ ಬೆನ್ನಲ್ಲೇ ಮತ್ತೊಂದು ದುರಂತ ಕಲಬುರಗಿಯಲ್ಲಿ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ಬಾಲಕರಿಬ್ಬರು ನೀರುಪಾಲಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಹಳೇ ಶಹಾಬಾದ್ ಬಡಾವಣೆ ಹತ್ತಿರದ ಅಜನಿ ಹಳ್ಳದಲ್ಲಿ ಪ್ರವಾಹ ಉಂಟಾಗಿದೆ. ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ ಚೆಕ್ ಡ್ಯಾಂ ಮೇಲೂ ನೀರು ಹರಿಯುತ್ತಿತ್ತು. ಆದರೂ ಹಳೇ ಶಹಾಬಾದ್ ನಿವಾಸಿ ವಿಶ್ವನಾಥ ರಾಜು ರಾಜನ್ (14) ಮತ್ತು ಪೂರ್ಣಚಂದ್ರ ಆನಂದ ಜಾಯಿ (15) ಹಳ್ಳ ದಾಟಲು ಕಾಲಿಡುತ್ತಿದ್ದಂತೆಯೇ ಕಾಲು ಜಾರಿ ಕೆಳೆಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋದರು. ನೋಡನೋಡುತ್ತಿದ್ದಂತೆಯೇ ಪ್ರಾಣಬಿಟ್ಟರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಅನತಿ ದೂರದಲ್ಲಿ ಶವಗಳು ಪತ್ತೆಯಾಗಿವೆ. ಶಹಾಬಾದ್ ಠಾಣೆಯಲ್ಲಿ ದಾಖಲಾಗಿದೆ. ಮಕ್ಕಳ ಶವವನ್ನು ಹೊರ ತೆಗೆಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.