

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗ ಸೇರಿ ರಾಜ್ಯದ ನಾನಾ ಭಾಗದಲ್ಲಿ ವರುಣಾರ್ಭಟ ಇರಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮೂರು ದಿನ ಮಳೆರಾಯನ ಅಬ್ಬರ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಭಾರೀ ಮಳೆಯಾಗಲಿದೆ.
ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ಕೆಲವೆಡೆ ಬಿರುಗಾಳಿ, ಗುಡುಗು ಮಿಂಚಿನ ಸಾಧ್ಯತೆ ಇರಲಿದೆ. ಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಇಂದು ಕೂಡ ಗಾಳಿ ಇದೇ ವೇಗದಲ್ಲಿ ಇರಲಿದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. (ದಿಗ್ವಿಜಯ ನ್ಯೂಸ್)