More

    ಇನ್ಮುಂದೆ ನಿಂತ್ಕಂಡೇ ಹೋಗ್ಬೇಕು ಕಣಮ್ಮಾ.. – ಕೆಎಸ್ಸಾರ್ಟಿಸಿ ಬಸ್‌ಗಳು ಓವರ್‌ಲೋಡ್!

    ದಾವಣಗೆರೆ: ಮಹಿಳೆ: ಸಾರ್ ಆಧಾರ್‌ಕಾರ್ಡ್ ಮೊಬೈಲ್‌ನಲ್ಲಿದೆ, ಟಿಕೆಟ್ ಕೊಡ್ತೀರಾ?
    ಕಂಡಕ್ಟರ್: ನಾನು ಟಿಕೆಟ್ ಕೊಡಬಹುದು. ಸ್ವಲ್ಪ ದೂರ ಹೋದಮೇಲೆ ನನ್ನ ದುರಾದೃಷ್ಟಕ್ಕೆ ನಿನ್ನ ಮೊಬೈಲ್ ಸ್ವಿಚಾಫ್ ಆಗಿ ಚೆಕಿಂಗ್ ಆಫೀಸರ್ ಬಂದರೆ ನಾನೇನ್ ಮಾಡ್ಲಿ…?
    ಮಹಿಳೆ: ಸಂತೆಬೆನ್ನೂರು ಕಡೆ ಹೋಗೋ ಬಸ್ ಫುಲ್ ರಷ್ ಆಗಿದೆ. ಕೂರಲಿಕ್ಕೂ ಜಾಗ ಇಲ್ಲ. ಬೇರೆ ಬಸ್ ಯಾವಾಗ ಬರುತ್ತೆ ಸಾರ್?
    ಬಸ್ ನಿಲ್ದಾಣದ ಸಿಬ್ಬಂದಿ: ಬೇರೆ ಬಸ್ ಬರೋದು ಲೇಟಾಗುತ್ತೆ. ಕೂರಲಿಕ್ಕೆ ಜಾಗ ಇಲ್ಲಾಂದ್ರೆ ನಾನೇನ್ ಮಾಡಲಮ್ಮ, ಇನ್ಮುಂದೆ ಹೀಗೇನೆ. ಕೂರಂಗಿಲ್ಲ, ನಿಂತ್ಕಂಡೇ ಹೋಗಬೇಕು ಕಣಮ್ಮಾ..!
    ಖಾಸಗಿ ಬಸ್ ಏಜೆಂಟ್ 1: ಸಿದ್ದರಾಮಯ್ಯ ಹಿಂಗೆ ಮಾಡ್ಬಾರದಿತ್ತು. ಗೌರ್ಮೆಂಟ್ ಬಸ್‌ನಲ್ಲಿ ಹೆಣ್ಮಕ್ಳಿಗೆ ಫ್ರೀ ಮಾಡಿದ್ದೇನೋ ಸರಿ. ಆದರೆ ಖಾಸಗಿ ಬಸ್‌ನೋರ ಬಗ್ಗೆ ಯಾಕೆ ಯೋಚ್ನೆ ಮಾಡಲಿಲ್ಲ?
    ಖಾಸಗಿ ಬಸ್ ಏಜೆಂಟ್ 2: ನಮ್ ಕಲೆಕ್ಷನ್ ಕಡಿಮೆ ಆಗ್ತಿದೆ ಅಂದ್ರೆ ಸರ್ಕಾರದವರು ಕೇಳ್ತಾರಾ. ಎಲ್ಲಿವರೆಗೆ ನಡೆಸ್ತಾರೆ ನಡೆಸ್ಲಿ ಬಿಡು.
    .. ದಾವಣಗೆರೆಯ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಕೇಳಿ ಬಂದ ವಿಭಿನ್ನ ಸಂಭಾಷಣೆಗಳಿವು. ಸೋಮವಾರ ಎಲ್ಲಿ ನೋಡಿದರೂ ಶಕ್ತಿ ಗ್ಯಾರಂಟಿ ಯೋಜನೆಯದ್ದೇ ಚರ್ಚೆ ಸಾಮಾನ್ಯವಾಗಿತ್ತು.
    ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಂತೂ ಯುವತಿಯರು, ಮಹಿಳೆಯರ ದಂಡೇ ನೆರೆದಿತ್ತು. ನಿಲ್ದಾಣಕ್ಕೆ ಇನ್ನೇನು ಬಸ್ ಬರುತ್ತಿದೆ ಎಂದ ಕೂಡಲೇ ಮುಗಿಬಿದ್ದು ಹತ್ತುತ್ತಿದ್ದರೆ, ಕೆಲವರು ಕಿಟಕಿಗಳಿಂದಲೇ ವೇಲ್, ಬ್ಯಾಗ್ ಹಾಕಿ ಜಾಗ ಭದ್ರ ಮಾಡಿಕೊಳ್ಳುತ್ತಿದ್ದರು. ‘ಆಧಾರ್‌ಕಾರ್ಡ್, ಎಪಿಕ್ ಕಾರ್ಡ್, ಗುರ್ತಿನ ಚೀಟಿ ಇದ್ದವರು ಮಾತ್ರ ಹತ್ತಿ’ ಎಂದು ಕಂಡಕ್ಟರ್ ಕೂಗುತ್ತಿದ್ದರು.
    ನಗರ ಸಾರಿಗೆ ಇರಲಿ, ರೂಟ್ ಬಸ್‌ಗಳೇ ಇರಲಿ ಎಲ್ಲವೂ ಬಂದ ತಕ್ಷಣ ಫುಲ್ ಆಗುತ್ತಿದ್ದವು. ಪುರುಷರಿಗೆ ಶೇ.50ರಷ್ಟು ಆಸನ ಮೀಸಲೆಂಬ ನಿಯಮ ಬಸ್‌ಗಳಲ್ಲಿ ಲಾಗೂ ಆಗುತ್ತಿರಲಿಲ್ಲ!
    ಕೆಲವು ಬಸ್‌ಗಳಲ್ಲಿ 55 ಸೀಟುಗಳ ಪರವಾನಗಿ ಇದ್ದರೆ 120 ಜನರನ್ನು ಹತ್ತಿಸಿಕೊಳ್ಳಲಾಗುತ್ತಿತ್ತು. ವಿದ್ಯಾರ್ಥಿನಿಯರೂ ಸೇರಿ ಬಹುತೇಕರು ನಿಂತೇ ಪ್ರಯಾಣಿಸಿದರು. ಕೆಲವರು ಫುಟ್‌ಬೋರ್ಡ್ ಮೇಲೂ ನಿಂತಿದ್ದರು. ಇಂತಹ ಭರ್ಜರಿ ಬಸ್‌ಗಳು ಆರಂಭದಲ್ಲಿ ಪಿಕಪ್ ತೆಗೆದುಕೊಳ್ಳಲು ಹರಸಾಹಸ ಮಾಡಿದವು!
    ‘ಎಲ್ಲಾ ಕಡೆನೂ ಹಿಂಗೆ ರಷ್ ಸಾರ್, ಹೆಣ್ಣುಮಕ್ಕಳಿಗೆ ಹತ್ತಬೇಡಿ ಎಂದು ಹೇಳಲಿಕ್ಕೆ ಆಗೋದಿಲ್ಲ. ಬೆಳಗ್ಗಿನಿಂದ ಮೂರು ಟ್ರಿಪ್ ಮಾಡಿದ್ದೇನೆ. ಎಲ್ಲ ಟ್ರಿಪ್‌ನಲ್ಲೂ ನೂರಕ್ಕಿಂತಲೂ ಹೆಚ್ಚು ಜನ ಹತ್ತಿದ್ದಾರೆ ಸಾರ್’ ಎಂದು ಕೆಎಸ್‌ಆರ್‌ಟಿಸಿ ಚಾಲಕ ರಾಜು ಹೇಳಿದರು.
    ‘ಕೆಲವು ಹೆಣ್ಣುಮಕ್ಕಳು ಮೊಬೈಲ್‌ನಲ್ಲಿ ಆಧಾರ್‌ಕಾರ್ಡ್ ತೋರಿಸುತ್ತಾರೆ. ಕೆಲವರು ಜೆರಾಕ್ಸ್ ಪ್ರತಿ ತೋರಿಸುತ್ತಾರೆ, ಅದರಲ್ಲಿ ಕೆಲವರ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಮಹಿಳೆಯರಿಗೆ ಫ್ರೀ ಇದ್ದರೂ ಅವರ ಗಂಡಂದಿರು, ಮಕ್ಕಳು ಕೂಡ ಪ್ರಯಾಣ ಮಾಡುತ್ತಿದ್ದಾರೆ’ ಎಂದು ಮತ್ತೊಬ್ಬ ಚಾಲಕ ರಾಜಪ್ಪ ತಿಳಿಸಿದರು.
    * ಕ್ಷೀಣಿಸಿದ ಖಾಸಗಿ ಪ್ರಯಾಣದ ಒಲವು
    ಪಕ್ಕದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಜಗಳೂರು, ಚನ್ನಗಿರಿ, ಹರಪನಹಳ್ಳಿ, ಬಾಡಾ, ಸಂತೆಬೆನ್ನೂರು, ಸೂಳೆಕೆರೆ-ಚನ್ನಗಿರಿ, ಹೊಳಲ್ಕೆರೆ ಇತ್ಯಾದಿ ಕಡೆಗಳಲ್ಲಿ ಖಾಸಗಿ ಬಸ್‌ಗಳು ಸ್ಪರ್ಧೆ ಒಡ್ಡಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳತ್ತ ಮಹಿಳಾ ಪ್ರಯಾಣಿಕರು ಮುಗಿ ಬೀಳುತ್ತಿದ್ದಾರೆ.
    ಜಿಲ್ಲೆಯಲ್ಲಿ ಶೇ.38ರಷ್ಟು ಹಳ್ಳಿಗಳಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸುತ್ತಿಲ್ಲ. ಕುಗ್ರಾಮಗಳಿಗೂ ತಲುಪುತ್ತಿಲ್ಲ. ಅದರಿಂದ ಶೇ.10ರಷ್ಟು ಲಾಭವನ್ನು ಖಾಸಗಿಯವರು ಪಡೆಯಲು ಅನುಕೂಲವಾಗಿದೆ. ಆದರೆ ಮುಂದಿನ ದಿನಗಳಲ್ಲೂ ಅಲ್ಲಿಗೂ ಸರ್ಕಾರಿ ಬಸ್ ಬಂದರೆ ಹೇಗೆ ಎಂಬ ಚಿಂತೆ ಏಜೆಂಟರಲ್ಲಿದೆ. ಬೆಳವಣಿಗೆ ಗಮನಿಸಿ ತೀರ್ಮಾನ ಕೈಗೊಳ್ಳುವ ಇರಾದೆ ಬಸ್ ಮಾಲೀಕರದು.
    ‘ಒಂದು ಖಾಸಗಿ ಬಸ್ ಹಿಂದೆ 25 ಜನರ ಜೀವನ ಅವಲಂಬಿತವಾಗಿದೆ. ಈಗಿರುವ ಡೀಸೆಲ್, ಟೈರ್ ಎಲ್ಲದರ ದರ ಏರಿಕೆಯಾಗಿದೆ. ಸ್ಟೇಟ್ ಕ್ಯಾರೇಜ್ ವಾಹನಗಳಿಗೆ ಹೆಚ್ಚು ತೊಂದರೆಯಾಗಿದ್ದು 3 ತಿಂಗಳಿಗೆ 48 ಸಾವಿರ ರೋಡ್ ಟ್ಯಾಕ್ಸ್ ತುಂಬಬೇಕು. ಬೆಳಗ್ಗೆ-ಸಂಜೆಯ ಪೀಕ್ ಹವರ್‌ನಲ್ಲಾದರೂ ಖಾಸಗಿ ಬಸ್‌ಗಳಿಗೆ ಅವಕಾಶ ಕೊಡಬೇಕು’ ಎನ್ನುತ್ತಾರೆ ಏಜೆಂಟ್ ಉಮೇಶರಾವ್ ಸಾಳಂಕಿ.
    ಮೊದಲಿನಷ್ಟು ಕಲೆಕ್ಷನ್ ಆಗುತ್ತಿಲ್ಲ, ಹೆಣ್ಣುಮಕ್ಕಳು ಜಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಬಂದು ಅಲ್ಲಿಂದ ಖಾನಾಹೊಸಳ್ಳಿಗೆ ಹೋಗಲು ಖಾಸಗಿ ಬಸ್ ಅವಲಂಬಿಸಿದ್ದಾರೆ ಎಂದು ಹೇಳಿದರು ಖಾಣಾಹೊಸಳ್ಳಿ-ಭರಮಸಾಗರ ಮಾರ್ಗದ ಖಾಸಗಿ ಬಸ್ ಚಾಲಕ ಸುರೇಶ್.
    ಚನ್ನಗಿರಿ-ಬಾಡಾ-ಸಂತೆಬೆನ್ನೂರು ಮಾರ್ಗದಲ್ಲಿ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಖಾಸಗಿ ಬಸ್‌ನ ಆದಾಯ 5 ಸಾವಿರದಷ್ಟು ಕುಸಿದಿದೆ ಎಂದು ಹೇಳಿದರು ಆ ಮಾರ್ಗದ ಬಸ್ ಏಜೆಂಟ್ ಲಿಂಗರಾಜ್.
    44237 ಸ್ತ್ರೀಯರ ಪ್ರಯಾಣ
    19.21 ಲಕ್ಷ ಮೊತ್ತದ ಟಿಕೆಟ್!
    ದಾವಣಗೆರೆ ಸಾರಿಗೆ ಸಂಸ್ಥೆ ವಿಭಾಗದ ವ್ಯಾಪ್ತಿಯಲ್ಲಿ ಭಾನುವಾರ ಮತ್ತು ಸೋಮವಾರ (ರಾತ್ರಿ 8ರವರೆಗೆ) 306 ಬಸ್‌ಗಳಲ್ಲಿ ಒಟ್ಟು 44237 ಸ್ತ್ರೀಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಒಟ್ಟು 19.21 ಲಕ್ಷ ರೂ. ಮೊತ್ತದ ಶೂನ್ಯ ದರದ ಟಿಕೆಟ್‌ಗಳನ್ನು ನೀಡಲಾಗಿದೆ. ಭಾನುವಾರ ಅರ್ಧ ದಿನದಲ್ಲಿ 9597, ಸೋಮವಾರ 34640 ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts