

Heavy rain in Spain : ದೂರದ ಸ್ಪೇನ್‌ನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, ಪ್ರವಾಹಕ್ಕೆ ಸುಮಾರು 95 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಐರೋಪ್ಯ ದೇಶವಾದ ಸ್ಪೇನ್ನ ವೆಲೆನ್ಸಿಯಾ ಪ್ರಾಂತ್ಯದಲ್ಲಿ ನಿನ್ನೆ ದಿಢೀರ್ ಮಳೆ ಸುರಿದಿದೆ. ಇದರಿಂದಾಗಿ ಅಲ್ಲಿನ ನದಿಗಳಲ್ಲಿ ಭಾರಿ ಪ್ರವಾಹ ಉಂಟಾಗಿ, ಮುಖ್ಯರಸ್ತೆಗಳು ಹಾಗೂ ಜನವಸತಿ ಪ್ರದೇಶಗಳು ಜಲಾವೃತಗೊಂಡವು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಕೂಡ ಪ್ರವಾಹಕ್ಕೆ ತರಗೆಲೆಯಂತೆ ಕೊಚ್ಚಿ ಹೋಗಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹೆಲಿಕಾಪ್ಟರ್ ಬಳಸಬೇಕಾಯಿತು. ನೀರಿನ ಹೊಡೆತಕ್ಕೆ ಕೊಚ್ಚಿ ಹೋಗಿ ಕಾಣೆಯಾಗಿದ್ದವರಲ್ಲಿ ಅನೇಕ ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಮಳೆ ನೀರು ತುಂಬಿ ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರವಾಹದ ಕಾರಣ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾಗೆ ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಮತ್ತು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಸ್ಪೇನ್ನ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪ್ರಯಾಣಕ್ಕೆ ರಸ್ತೆ ಪ್ರಯಾಣವನ್ನು ತಪ್ಪಿಸುವಂತೆ ನಾಗರಿಕರನ್ನು ಸ್ಪೇನ್ ಸರ್ಕಾರ ಒತ್ತಾಯಿಸಿದೆ. (ಏಜೆನ್ಸೀಸ್)