ಉತ್ತರ ರಾಜ್ಯಗಳಲ್ಲಿ ಮತ್ತೆ ರೆಡ್ ಅಲರ್ಟ್; ದೆಹಲಿಯಲ್ಲಿ ಅಪಾಯ ಮಟ್ಟ ಮೀರಿದ ಯಮುನೆ

rain
Published on

ನವದೆಹಲಿ/ಅಹಮದಾಬಾದ್/ಮುಂಬೈ: ದೇಶದ ಉತ್ತರ ಹಾಗೂ ಪಶ್ಚಿಮ ಭಾರತದ ಹಲವು ರಾಜ್ಯಗಳು ಭಾರಿ ಮಳೆಯಿಂದ ತತ್ತರಿಸಿವೆ. ವರುಣನ ಆರ್ಭಟಕ್ಕೆ ಮಹಾರಾಷ್ಟ್ರ, ಗುಜರಾತ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮಿರ, ಹರಿಯಾಣ, ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುಜರಾತ್​ನ ಅಹಮದಾ ಬಾದ್, ಜುನಾಗಢ, ನವ್ಸಾರಿ ಜಾಮ್ಗರ, ದೇವಭೂಮಿ ದ್ವಾರಕಾ, ಕಛ್, ಭರೂಚ್, ವಲ್ಸದ್, ಸೂರತ್​ಗಳಲ್ಲಿ ಭಾರತೀಯ ಹವಾ ಮಾನ ಇಲಾಖೆ (ಐಎಂಡಿ) ಕಟ್ಟೆಚ್ಚರಿಕೆ ನೀಡಿದ್ದು, ಸೋಮವಾರದವರೆಗೂ ಭಾರಿ ಮಳೆ ಆಗಲಿದೆ ಎಂದು ತಿಳಿಸಿದೆ. ಸುರೇಂದ್ರ ನಗರ, ವಡೋದರ, ದಹೋಡ್, ರಾಜಕೋಟ್, ಬಟಾದ್​ಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಗಳ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ. ನಿಲ್ಲಿಸಿದ ಕಾರುಗಳು, ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಮರ ಮತ್ತ ವಿದ್ಯುತ್ ಕಂಬಗಳು ಬುಡಮೇಲಾಗಿದ್ದು, ಸಾವಿರಾರು ವಾಹನಗಳು ಜಖಂಗೊಂಡವೆ. ಜನಾಗಢದಲ್ಲಿ 3,000ಕ್ಕೂ ಹೆಚ್ಚುಮಂದಿ ಯನ್ನು ರಕ್ಷಿಸಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣ ಜಲಾವೃತವಾಗಿದ್ದು, ಮಂಡಿಯುದ್ದ ನೀರು ನಿಂತಿದೆ. ಜುನಾಗಢದಲ್ಲಿ 12 ತಾಸಿನಲ್ಲಿ 24 ಸೆಂ.ಮೀ. ಮಳೆಯಾಗಿದೆ. ನವ್ಸಾರಿ ಜಿಲ್ಲೆಯ ಹಲವು ಗ್ರಾಮಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದಲ್ಲಿ ಮೂವರು ಸಾವು

ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಅನೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ವಣವಾಗಿದೆ. ರಾಜ್ಯದ ಯವತ್ಮಾಲ್ ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ವಿದರ್ಭಾದಲ್ಲಿ ಕಳೆದ 10 ದಿನಗಳಿಂದ 16 ಜನರು ಮಳೆಯ ಕಾರಣಕ್ಕೆ ಅಸುನೀಗಿದ್ದಾರೆ ಮತ್ತು 4,500ಕ್ಕೂ ಹೆಚ್ಚು ಮನೆಗಳಿಗೆ ಹಾಗೂ 54 ಸಾವಿರ ಹೆಕ್ಟೇರ್​ನ ಬೆಳೆ ಹಾನಿಯಾಗಿದೆ. ಸುಮಾರು 3,500 ಜನರನ್ನು ಸ್ಥಳಾಂತರ ಮಾಡಲಾಗಿದೆ. ವಿದರ್ಭಾದ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಬೈ, ಥಾಣೆ, ರತ್ನಗಿರಿ, ರಾಯಗಢ, ಪಾಲ್ಘರ್, ಸಿಂಧುದುರ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಣೆ ಮಾಡಲಾಗಿದೆ. ರಾಜಧಾನಿ ಸೇರಿದಂತೆ ಮುಂಬೈ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ನೀರು ತುಂಬಿಕೊಂಡಿದ್ದ ರಸ್ತೆಗಳಲ್ಲಿ ಸಂಚರಿಸಲು ಜನರು ಪರದಾಡುತ್ತಿದ್ದಾರೆ. ಇದರಿಂದ ವಾಣಿಜ್ಯ ನಗರಿಯ ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಸಿಎಂ ಜತೆ ಅಮಿತ್ ಷಾ ಚರ್ಚೆ

ಗುಜರಾತ್​ನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಉಂಟಾಗಿರುವ ಹಿನ್ನೆಲೆಯ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ, ಪರಿಹಾರ ಕಾರ್ಯಾಚರಣೆ, ನಿರಾಶ್ರಿತರ ಶಿಬಿರಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಪರಿಶೀಲನೆ ನಡೆಸಿದ್ದಾರೆ. ಸಿಎಂ ಭೂಪೇಂದ್ರ ಪಟೇಲ್​ಗೆ ಖುದ್ದು ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಪರಿಹಾರ ಕಾರ್ಯಕ್ಕೆ ಹೆಚ್ಚುವರಿ ತಂಡ ರವಾನಿಸುವುದಾಗಿ ತಿಳಿಸಿದ್ದಾರೆ.

200 ಮಂದಿ ಸ್ಥಳಾಂತರ

ಹರಿಯಾಣ, ಹಿಮಾಚಲ ಪ್ರದೇಶದಲ್ಲಿ ಸತತ ಮಳೆಯಿಂದ ಯಮುನೆ ಮತ್ತೆ ಅಪಾಯದ ಮಟ್ಟ ದಾಟಿದ್ದು, ಜನ ಆತಂಕಗೊಂಡಿದ್ದಾರೆ. ಕಳೆದ 36 ಗಂಟೆಯಿಂದ ಸುರಿಯುತ್ತಿರುವ ಮಳೆಯ ಕಾರಣ ಹರಿಯಾಣದ ಡ್ಯಾಂನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಯಮುನಾ ನದಿ 206 ಮೀ.ಗೂ ತುಸು ಹೆಚ್ಚಿನ ಮಟ್ಟದಿಂದ ಹರಿಯುತ್ತಿದೆ ಈ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಷಾ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಜತೆ ಮಾತನಾಡಿ ಸಿದ್ಧತಾ ಕಾರ್ಯಗಳ ವಿವರ ಪಡೆದಿದ್ದಾರೆ. ನದಿಯ ಹರಿವು ಹೆಚ್ಚಳವಾದ ಹಿನ್ನಲೆ ಪ್ರವಾಹ ಭೀತಿ ಎದುರಾಗಿದ್ದು, ತಗ್ಗು ಪ್ರದೇಶಗಳಲ್ಲಿ ಸಂಕಷ್ಟ ಪರಿಸ್ಥಿತಿ ಉಂಟಾಗಲಿದೆ. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಗೆ ಒಳಪಡುವ ದೆಹಲಿ ಎನ್​ಸಿಆರ್ ವ್ಯಾಪ್ತಿ ನೊಯ್ಡಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನದಿ ಕೆಳಪಾತ್ರದ 5 ಗ್ರಾಮಗಳಿಂದ ಸುಮಾರು 200 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಲಾಗಿದೆ. ಹಿಂಡನ್ ನದಿಯು ಪ್ರಸ್ತುತ 200 ಮೀ. ಎತ್ತರದಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟ 205 ಮೀ.ಗೆ ಏರಿದರೆ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ.

ಕೊಚ್ಚಿ ಹೋದ ದಂಪತಿ

ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ದಿಂದ ಹಠಾತ್ ಪ್ರವಾಹ ಉಂಟಾಗಿ ಶಿಮ್ಲಾ ಜಿಲ್ಲೆಯಲ್ಲಿ ವೃದ್ಧ ದಂಪತಿ ಮೊಮ್ಮಗನ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಆಫ್ಘನ್​ನಲ್ಲಿ 12 ಮರಣ

ಆಫ್ಘಾನಿಸ್ತಾನದಲ್ಲಿ ದಿಢೀರ್ ಮಳೆಯ ಕಾರಣ ಉಂಟಾದ ಪ್ರವಾಹದಲ್ಲಿ 12 ಮಂದಿ ಸಾವ್ನಪ್ಪಿದ್ದು, 40 ಮಂದಿ ಕಣ್ಮರೆ ಯಾಗಿದ್ದಾರೆ ಎಂದು ತಾಲಿಬಾನ್ ಆಡಳಿತ ತಿಳಿಸಿದೆ.

ಚೀನಾದಲ್ಲಿ ಐವರ ಸಾವು

ಚೀನಾದ ಪೂರ್ವ ಭಾಗದ ಫ್ಯೂಯಾಂಗ್ ಜಿಲ್ಲೆಯಲ್ಲಿ ಭಾರಿ ಮಳೆಯ ಕಾರಣ ಪ್ರವಾಹಕ್ಕೆ ಸಿಲುಕಿ ಐವರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. 1,500ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net