ಮಳೆಯಿಂದ ನಿರಾಶ್ರಿತರಾದ ಕೆ.ಮಲ್ಲಂಡಹಳ್ಳಿಯಲ್ಲಿ ಗ್ರಾಮಸ್ಥರು

15-klr-5
Published on

ಕೋಲಾರ: ತಾಲೂಕಿನ ಕೆ.ಮಲ್ಲಂಡಹಳ್ಳಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಐದಾರು ಕುಟುಂಬಗಳು ನಿರಾಶ್ರಿತರಾಗಿದ್ದು, ಮನೆಗಳು ಕುಸಿಯುವ ಭೀತಿಯಿಂದ ಪರರ ಆಶ್ರಯ ಪಡೆದಿದ್ದಾರೆ.

ಬಸವ, ಲಕ್ಷ್ಮಮ್ಮ, ಕೆಂಪಣ್ಣ, ತುಳಸಿರಾಮಯ್ಯ, ಬಚ್ಚಪ್ಪ ಇನ್ನಿತರರು ತಗ್ಗು ಪ್ರದೇಶದ ಹಳೆಯ ಕಟ್ಟಡಗಳಲ್ಲಿ ವಾಸ ವಾಡುತ್ತಿದ್ದು, ಮಳೆಯಿಂದ ಮನೆಗಳ ಮೇಲೆ ಹಾಸಿರುವ ಹಂಚುಗಳು ಗಾಳಿಗೆ ಹಾರಿ ಹೋಗಿವೆ, ಹಳೆ ಕಟ್ಟಡವಾದ್ದರಿಂದ ಗೋಡೆಗಳು ಕುಸಿದಿವೆ, ಮನೆ ಜಲಾವೃತವಾಗಿರುವುದರಿಂದ ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಲು ಮನೆಯಿಂದ ಹೊರ ಬಂದು ಇಡೀ ರಾತ್ರಿ ಮಳೆಯಲ್ಲಿ ಕಾಲ ಕಳೆದಿದ್ದಾರೆ.

ವಿಷಯ ತಿಳಿದ ಗ್ರಾಮದ ಯುವ ಮುಖಂಡ ಲೋಕೇಶ್ ಎಂಬುವರು ಸ್ಥಳಕ್ಕೆ ಧಾವಿಸಿ ಸಂತ್ರಸ್ಥರಿಗೆ ಮನೆಯೊಂದರಲ್ಲಿ ರಕ್ಷಣೆ ಒದಗಿಸಿದ್ದಾರೆ. ಬಸವ ಎಂಬುವರ ಮನೆಯಲ್ಲಿ ಅಕ್ಕಿ,ರಾಗಿ,ಗೊಬ್ಬರ, ಕೀಟ ನಾಶಕ ಔಷಧಿ, ಬಟ್ಟೆ, ಹಾಸಿಗೆ ನೀರು ಪಾಲಾಗಿದೆ, ಗೋಡೆ ಕುಸಿತದಿಂದ ಪಾತ್ರೆಗಳು ಜಖಂಗೊಂಡಿದ್ದು ಮುಂದೆ ಜೀವನ ನಡೆಸುವುದಕ್ಕೆ ಸಮಸ್ಯೆಯನ್ನುಂಟು ವಾಡಿದೆ. ಉಳಿದವರ ಮನೆಗಳಿಗೂ ಹಾನಿಯಾಗಿದೆ, ಬಡವರು ಹಳೆ ಮನೆಗಳಲ್ಲಿ ನೆಮ್ಮದಿಯಿಂದ ವಾಸ ವಾಡಲು ಸಾಧ್ಯವಾಗುತ್ತಿಲ್ಲ, ಕಳೆದ ವರ್ಷ ಮಳೆಯಿಂದ ಇದೇ ಗ್ರಾಮದ ದಂಪತಿ ಮನೆ ಕುಸಿತದಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಗ್ರಾಮದಲ್ಲಿ ಮತ್ತೆ ಮಳೆಯಿಂದ ಜನ ತತ್ತರಿಸಿದ್ದು ಗ್ರಾಪಂ ಪಿಡಿಒ, ತಹಸೀಲ್ದಾರ್ ಅಥವಾ ಜನಪ್ರತಿನಿಧಿಗಳು ಈವರೆಗೂ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವುದಾಗಲಿ, ಸಂತ್ರಸ್ಥರಿಗೆ ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಯುವ ಮುಖಂಡ ಲೋಕೇಶ್ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net