

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನಗಳಿಗೆ ಮುಂದುವರಿಯಲಿದೆ. ಸೋಮವಾರ ತುಮಕೂರು 11 ಸೆಂ.ಮೀ., ಭಾಗಮಂಡಲ 9 ಸೆಂ.ಮೀ. ಮಳೆ ಬಿದ್ದಿದೆ.
ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಆ.2ರಿಂದ ಆ.5ರವರೆಗೆ ವ್ಯಾಪಕವಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಹೇಳಿದೆ. ತುಮಕೂರು, ರಾಮನಗರದಲ್ಲಿ ಆ.4ರಂದು ಮತ್ತು ಬೀದರ್‌ನಲ್ಲಿ ಆ. 5ರಂದು ಭಾರಿ ಮಳೆ ಬೀಳುವ ಮೂನ್ಸೂಚನೆ ಇರುವುದರಿಂದ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ.
ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ತುಮಕೂರು, ಚಾಮರಾಜನಗರ ಮುಂದಿನ 24 ಗಂಟೆ ಹಾಗೂ ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗದಲ್ಲಿ ಆ.5ರಂದು ಯೆಲ್ಲೋ ಅಲರ್ಟ್ ಇರಲಿದೆ. 10 ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಪ್ರಸ್ತುತ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.