ಕೃಷ್ಣಾ, ಕಾವೇರಿ ಕಣಿವೆ, ಮಲೆನಾಡಿನಲ್ಲಿ ಮಳೆ ಪುಳಕ, ನೆರೆ ನರಕ

state- temple
Published on

ಬೆಂಗಳೂರು: ರಾಜ್ಯಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು, ಕೃಷ್ಣಾ, ಕಾವೇರಿ ಕಣಿವೆ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಅವಳಿ ಜಿಲ್ಲೆಗೆ ಸಂಕಷ್ಟ: ಮಲಪ್ರಭಾ ನದಿ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ 34 ಹಳ್ಳಿಗಳು ಸಂಕಷ್ಟ ಎದುರಿಸುತ್ತಿವೆ. ಘಟಪ್ರಭೆಯಲ್ಲಿ 70 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಮುಧೋಳ ತಾಲೂಕಿನ ನದಿದಡದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ 35 ಮನೆಗಳಿಗೆ ಹಾನಿಯಾಗಿದೆ.

ಕೊಡಗು, ಕರಾವಳಿಯಲ್ಲಿ ಸಾಧಾರಣ: ಕೊಡಗು, ಮೈಸೂರು, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಸಮುದ್ರದಲ್ಲಿ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಿರಂತರ ಮಳೆ ಮುಂದುವರಿದಿದೆ.

ತೆಪ್ಪ ಮಗುಚಿ ನಾಲ್ವರು ನೀರುಪಾಲು: ತೆಲಂಗಾಣ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ರಾಯಚೂರು ತಾಲೂಕಿನ ಕುರ್ವಕಲಾ (ಪೆದ್ದ ಕುರ್ವ) ನಡುಗಡ್ಡೆಯ ನಾಲ್ವರು ಸೋಮವಾರ ನೀರು ಪಾಲಾಗಿದ್ದಾರೆ. ಕೃಷ್ಣಾ ನದಿಯಲ್ಲಿನ ನಡುಗಡ್ಡೆಯಾಗಿರುವ ಕುರ್ವಕಲಾದಿಂದ ದಿನಸಿ ಖರೀದಿಗೆಂದು ತೆಲಂಗಾಣದ ಪಂಚಪಾಡು ಗ್ರಾಮಕ್ಕೆ ತೆರಳಿ, ನಡುಗಡ್ಡೆಗೆ ವಾಪಸಾಗುವಾಗ ದುರ್ಘಟನೆ ಜರುಗಿದೆ. ತೆಪ್ಪದಲ್ಲಿ 13 ಜನರಿದ್ದರು. ಇದರಲ್ಲಿ ಒಂಬತ್ತು ಜನ ಈಜಿ ದಡ ಸೇರಿದರೆ, ನಾಲ್ವರು ನೀರಿಗೆ ಕೊಚ್ಚಿ ಹೋಗಿದ್ದಾರೆ. ಸುಮಲತಾ (35), ರೋಜಾ (6), ನರಸಮ್ಮ ರಾಮುಲು (40), ಪಾರ್ವತಿ (50) ನೀರುಪಾಲಾದವರು.

ಕೊಚ್ಚಿ ಹೋದ ಯುವತಿ: ತುಂಬಿ ಹರಿಯುತ್ತಿರುವ ಕುಮದ್ವತಿ ನದಿಯಲ್ಲಿ ಸೋಮವಾರ ಸಂಜೆ ಬಟ್ಟೆ ತೊಳೆಯಲು ಹೋದ ರಾಣೆಬೆನ್ನೂರು ತಾಲೂಕು ಮಲಕನಹಳ್ಳಿಯ ಶಶಿಕಲಾ ಶಿವಪ್ಪ ಮಾಳಿಗೇರ (19) ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಮನೆ ಕುಸಿದು ಗೃಹಿಣಿ ಸಾವು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗಿದ್ದು, ರಾಯಚೂರಿನ ನದಿದಂಡೆ ಗ್ರಾಮಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಈಗಾಗಲೆ ದೇವದುರ್ಗ ತಾಲೂಕು ಹೂವಿನಹೆಡಗಿ ಸೇತುವೆ ಮತ್ತು ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಿದೆ. ದೇವದುರ್ಗ ತಾಲೂಕು ರಾಮದುರ್ಗ ಗ್ರಾಮದಲ್ಲಿ ಸತತ ಮಳೆಯಿಂದ ನೆನೆದಿದ್ದ ಮನೆಯೊಂದರ ಗೋಡೆ ಕುಸಿದು ಪದ್ಮಾವತಿ (32) ಎಂಬುವರು ಮೃತಪಟ್ಟಿದ್ದಾರೆ.

ಗರಿಷ್ಠ ಮಟ್ಟಕ್ಕೆ ಕೆಆರ್​ಎಸ್: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಸೋಮವಾರ 124.80 ಅಡಿ ಗರಿಷ್ಠ ಮಟ್ಟ ತಲುಪುವ ಮೂಲಕ ಈ ಬಾರಿಯೂ ಆಗಸ್ಟ್ ತಿಂಗಳಿನಲ್ಲೇ ಭರ್ತಿಯಾದಂತಾಗಿದೆ. ಒಳಹರಿವಿನ ಪ್ರಮಾಣ 9228 ಕ್ಯೂಸೆಕ್ ಇದ್ದರೆ, 25580 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಹೇಮಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾಸನದ ಗೊರೂರು ಅಣೆಕಟ್ಟೆಯಿಂದ 19 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಕೆಆರ್​ಎಸ್ ಅಣೆಕಟ್ಟೆಯ ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೆಚ್ಚುತ್ತಿದೆ ಪ್ರವಾಹ ಭೀತಿ ಬೆಳಗಾವಿಯ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹದ ಭೀತಿ ಇನ್ನಷ್ಟು ಹೆಚ್ಚಿದೆ. ಈಗಲೇ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಗೆ ಯಾವುದೇ ಕ್ಷಣದಲ್ಲಾದರೂ ಮತ್ತಷ್ಟು ನೀರು ಬರುವ ಸಾಧ್ಯತೆ ಇದ್ದು, ನಡುಗಡ್ಡೆಯಂತಾಗಿರುವ ನರಗುಂದದ ಲಖಮಾಪೂರ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೋಮವಾರ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು.

ನಿಲ್ಲದ ‘ಮಹಾ’ಮಳೆ ಅವಾಂತರ:  ಮಹಾರಾಷ್ಟ್ರದ ಕೊಯ್ನಾ ಹಾಗೂ ಜಲಾನಯನ ಪ್ರದೇಶದಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯಲ್ಲಿನ ನದಿಗಳು ಮತ್ತೊಮ್ಮೆ ಉಕ್ಕಿ ಹರಿಯುತ್ತಿವೆ. ಜಿಲ್ಲಾಡಳಿತ ತೆೆರೆದಿರುವ ಆರೈಕೆ ಕೇಂದ್ರಗಳತ್ತ ನದಿತಟ ವಾಸಿಗಳು ಹೆಜ್ಜೆ ಹಾಕತೊಡಗಿದ್ದಾರೆ. ಖಾನಾಪುರದ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಲೋಂಡಾ-ಹುಬ್ಬಳ್ಳಿ ರೈಲು ಮಾರ್ಗದ ಶಿವಠಾಣ ರೈಲು ನಿಲ್ದಾಣದ ಬಳಿ ಭೂಕುಸಿತವಾಗಿದೆ.

ಕರ್ನಾಟಕ-ಆಂಧ್ರಪ್ರದೇಶ ರಸ್ತೆ ಸಂಪರ್ಕ ಕಡಿತ: ಕೃಷ್ಣಾ ನದಿ ಪ್ರವಾಹದಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಕರ್ನಾಟಕ, ಆಂಧ್ರಪ್ರದೇಶ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ನೀರು ಕೆಲ ಪ್ರದೇಶದಲ್ಲಿ ಅನಾಹುತ ಸೃಷ್ಟಿಸಿದೆ. ಒಂದೆಡೆ ಮಳೆ ರುದ್ರನರ್ತನ ಇದ್ದರೆ, ಮತ್ತೊಂದೆಡೆ ನೆರೆ ಭೀತಿ ಜನರಲ್ಲಿ ಮನೆ ಮಾಡಿದೆ. ಬಸವಸಾಗರದಿಂದ ಸೋಮವಾರ 2.77 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಹರಿಸಿದ್ದರಿಂದ ಸುಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನ ಜಲದಿಗ್ಭಂಧನವಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಏಳು ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಮುಂದಿನ 5 ದಿನ ಮುಂದುವರಿಯಲಿದೆ. ಆ.18ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗದಲ್ಲಿ ಆರೆಂಜ್ ಅಲರ್ಟ್, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹಂಪಿ ಸ್ಮಾರಕಗಳು ಮುಳುಗುವ ಸಾಧ್ಯತೆ: ಒಳಹರಿವು ಹೆಚ್ಚಳದ ಪರಿಣಾಮ ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಒಂದು ಲಕ್ಷ ಕ್ಯೂಸೆಕ್​ವರೆಗೂ ನದಿಗೆ ನೀರು ಹರಿಯುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ ಹಂಪಿಯ ಪುರಂದರದಾಸರ ಮಂಟಪ ಸೇರಿ ಅನೇಕ ಸ್ಮಾರಕಗಳು, ಕಂಪ್ಲಿಯ ಸೇತುವೆ ಮುಳುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net