ರಾಜ್ಯದಲ್ಲಿ ಜೂ. 1ರಿಂದ ಭಾರೀ ಮಳೆ

state rain
Published on

ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ತೆರೆಮರೆಗೆ ಸರಿಯುತ್ತಿದ್ದಂತೆ ಮುಂಗಾರು ಮಳೆಗೆ ದಿನಗಣನೆ ಶುರುವಾಗಿದ್ದು, ಆರಂಭದಲ್ಲೇ ಭಾರೀ ವರ್ಷಧಾರೆ ಆಗುವ ನಿರೀಕ್ಷೆ ಇದೆ.

ಜೂ.1ರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಕ್ಕೆ ಸೇರಿದ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿಗಿಂತ ಕರಾವಳಿ ಭಾಗದಲ್ಲಿ ಹೆಚ್ಚು ವರ್ಷಧಾರೆಯಾಗಲಿದೆ. ಈ ಅವಧಿಯಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕೆಲವೆಡೆ ಮಾತ್ರ ಹಗುರದಿಂದ ಕೂಡಿದ ಮಳೆಯಾಗಬಹುದು.

ಈ ಬಾರಿ ಮುಂಗಾರು ವಾಡಿಕೆಯಷ್ಟೇ ಮಳೆ ಸುರಿಸಲಿದ್ದರೂ, ಕೆಲ ಜಿಲ್ಲೆಗಳಲ್ಲಿ ಹೆಚ್ಚು ವರ್ಷಧಾರೆ ಆಗಲಿದೆ. ಮುಖ್ಯವಾಗಿ ದಕ್ಷಿಣಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆದಿನಗಳು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಹೆಚ್ಚು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.

ಕ್ಷೀಣಗೊಂಡ ಮಳೆ:

ಮಂಗಳವಾರ ರಾಜ್ಯದ ಕೆಲ ಸ್ಥಳಗಳಲ್ಲಿ ಮಾತ್ರ ಹಗುರದಿಂದ ಮಳೆಯಾಗಿದ್ದು ಬಿಟ್ಟರೆ, ಉಳಿದೆಡೆ ಮಳೆ ಹಿಂದೆ ಸರಿದಂತಿದೆ. ಕೆಲ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇದ್ದರೂ, ಮಳೆಯಾಗಲಿಲ್ಲ. ಶುಕ್ರವಾರದವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ವಾರಾಂತ್ಯ ಬಳಿಕ ಎಂದಿನಂತೆ ಮುಂಗಾರು ಅಡಿಯಿಡುತ್ತಿದ್ದಂತೆ ವರ್ಷಧಾರೆ ಆಗಲಿದೆ.

ಮುಂಗಾರು ಹಿನ್ನೆಲೆಯಲ್ಲಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಅನಾಹುತ ಆದಲ್ಲಿ ಅದನ್ನು ಎದುರಿಸಲು ಎನ್‌ಡಿಆರ್‌ಎಫ್​ ದಳ ಸೇರಿದಂತೆ ಇನ್ನಿತರ ತುರ್ತು ಸ್ಪಂದಾನ ಪಡೆಗಳನ್ನು ಸಜ್ಜಾಗಿ ಇರಿಸಿಕೊಳ್ಳಬೇಕು. ಯಾವುದೇ ಅವಘಡ ಸಂಭವಿಸಿದ್ದಲ್ಲಿ ತಕ್ಷಣವೇ ಅಂತಹ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಳ್ಳಲು ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಬೇಕು ಎಂದು ಸರ್ಕಾರ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net