ಮಳೆ ಜೋರು, ಬೆಳೆ ನಷ್ಟ: ಹಲವೆಡೆ ಫಸಲು ಹಾನಿ, ರಸ್ತೆ, ಸೇತುವೆ ನೀರುಪಾಲು

Rain
ಮೈಸೂರಿನ ಬೋಗಾದಿ ನಾಗಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಸೇತುವೆ ಕೊಚ್ಚಿಹೋಗಿರುವುದು.
Published on

ಬೆಂಗಳೂರು: ಮುಂಗಾರುಪೂರ್ವ ಮಳೆ ಬಿಟ್ಟೂಬಿಡದೆ ಸುರಿಯುತ್ತಿರುವ ಪರಿಣಾಮ ರಾಜ್ಯದ ಹಲವೆಡೆ ಬೆಳೆದು ನಿಂತ ಫಸಲು ನೀರುಪಾಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಂಗಳವಾರವೂ ವಿವಿಧ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ಬೆಳೆ ಹಾನಿ ಜತೆಗೆ ಮನೆ, ಮರ, ರಸ್ತೆ-ಸೇತುವೆಗಳೂ ನೀರುಪಾಲಾಗಿವೆ. ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮುಂದಿನ ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ರೆಡ್​ಅಲರ್ಟ್: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಗಾಳಿ ಇರುವುದರಿಂದ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಆರೆಂಜ್ ಅಲರ್ಟ್ ಕೊಡಲಾಗಿದೆ.

ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಮೇ 18,19ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಸಿಡಿಲಿಗೆ ಇಬ್ಬರ ಬಲಿ: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಪಾರ್ವತಿ ನಂದಕುಮಾರ (49) ಹಾಗೂ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಂಗಿಹಾಳ ಗ್ರಾಮದಲ್ಲಿ ಕುರಿಗಾಹಿ ಭೀಮಣ್ಣ ಹಿರೇಕುರುಬರ (38) ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಂತಾವರಂ ಗ್ರಾಮದ ಎಲಿಯಾ (35) ಸಿಡಿಲಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಯಾಣ ಕರ್ನಾಟಕದ ವಿವಿಧೆಡೆ ಸಿಡಿಲಿಗೆ 30 ಕುರಿಗಳು ಸತ್ತಿವೆ.

71 ಮನೆಗಳಿಗೆ ಹಾನಿ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ಬೋಟ್ ಮುಳುಗಿದ್ದು, ಇತರ ನಾಲ್ಕು ಬೋಟ್​ಗಳಿಗೆ ಹಾನಿಯಾಗಿದೆ. ಮುಂಡಗೋಡ ತಾಲೂಕಿನಲ್ಲಿ ಹಲವಾರು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಕೊಯ್ಲಿಗೆ ಬಂದಿದ್ದ ಮಾವಿನ ಫಸಲು ಉದುರಿ ಬೆಳೆಗಾರರಿಗೆ ನಷ್ಟವಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಕಟಾವು ಮಾಡಿದ ಭತ್ತದ ಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದೆ. ಅಕಾಲಿಕ ಮಳೆ-ಬಿರುಗಾಳಿಯಿಂದ ಹಾವೇರಿ, ರಾಣೆಬೆನ್ನೂರು, ಹಾನಗಲ್, ರಟ್ಟಿಹಳ್ಳಿ ಸೇರಿ ವಿವಿಧ ತಾಲೂಕುಗಳಲ್ಲಿ ಭಾರಿ ಹಾನಿಯಾಗಿದೆ.

ಒಟ್ಟು 71 ಮನೆಗಳು ಭಾಗಶಃ ಕುಸಿದಿವೆ. ತುಂಗಭದ್ರಾ ದಂಡೆಯ ಊರುಗಳಲ್ಲಿ ಬೆಳೆದಿದ್ದ ಭತ್ತದ ಫಸಲು ನೆಲಕ್ಕೊರಗಿದೆ. ಬಲಿತ ಮಾವಿನ ಕಾಯಿಗಳು ಉದುರಿವೆ. ಅನೇಕ ಕಡೆ ಮರಗಳು ಉರುಳಿ ಮನೆ, ವಿದ್ಯುತ್ ತಂತಿ ಮಾರ್ಗದ ಮೇಲೆ ಬಿದ್ದಿವೆ.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಮಸೂತಿ ಗ್ರಾಮದ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಎರಡು ಆಡು ಸೇರಿ 14 ಕುರಿಗಳು ಸಾವನ್ನಪ್ಪಿವೆ. ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ಧೋಂಡಿಬಾ ಮಲ್ಲಾರಿ ಸೆಂಡಿಗೆ ಎಂಬುವವರ ಆಡು-ಕುರಿಗಳು ಸಾವನ್ನಪ್ಪಿವೆ.

ಕೊಚ್ಚಿಹೋದ ಸೇತುವೆ: ಮೈಸೂರು ನಗರದಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮರಗಳು ಬುಡಮೇಲಾಗಿವೆ. ಇಲ್ಲಿನ ಬೋಗಾದಿಯ ನಾಗಲಿಂಗೇಶ್ವರ ದೇಗುಲ ಹಿಂಭಾಗದ ಸೇತುವೆ ಕೊಚ್ಚಿಹೋಗಿದೆ. ವಿದ್ಯಾರಣ್ಯಪುರಂನಲ್ಲಿ ಬೃಹತ್ ಗಾತ್ರದ ಮರ ಕಾರಿನ ಮೇಲೆ ಉರುಳಿದೆ. ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದಲ್ಲಿ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದು ಎರಡು ಹಸು ಹಾಗೂ ಒಂದು ಮೇಕೆ ಮೃತಪಟ್ಟಿವೆ.

ಅಸ್ಸಾಂನಲ್ಲಿ 2 ಲಕ್ಷ ಜನ ಸಂತ್ರಸ್ತ

ಗುವಾಹಟಿ/ಹಫ್ಲಾಂಗ್: ಅಸ್ಸಾಂನಲ್ಲಿ ಮಳೆಯಬ್ಬರ ತೀವ್ರವಾಗಿದ್ದು 20 ಜಿಲ್ಲೆಗಳ ಸುಮಾರು 2 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಸತತ ಮಳೆಯಿಂದಾಗಿ ಸಂಭವಿಸಿದ ಭೂಕುಸಿತಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಗುಡ್ಡಗಾಡು ಜಿಲ್ಲೆ ದಿಮಾ ಹಸಾವೊ ರಾಜ್ಯದ ಇತರ ಭಾಗಗಳಿಂದ ಪ್ರತ್ಯೇಕಗೊಂಡಿದೆ. ಭೂಕುಸಿತದಿಂದ ದಕ್ಷಿಣ ಅಸ್ಸಾಂ, ಬರಾಕ್ ಕಣಿವೆ ಅಲ್ಲದೆ ನೆರೆ ರಾಜ್ಯಗಳಾದ, ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ಕೆಲವು ಭಾಗಗಳೊಂದಿಗಿನ ಸಂಪರ್ಕವೂ ಕಡಿತಗೊಂಡಿದೆ. ಮೇಘಾಲಯದಲ್ಲೂ ಮಳೆ ರಭಸಕ್ಕೆ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಕೊಚ್ಚಿಹೋಗಿವೆ. ಕಚಾರ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇದಕ್ಕೂ ಮುನ್ನ ದಿಮಾ ಹಸಾವೋದಲ್ಲಿ ಭೂಕುಸಿತಕ್ಕೆ ಇಬ್ಬರು ಬಲಿಯಾಗಿದ್ದು ಸತ್ತವರ ಸಂಖ್ಯೆ ಐದಕ್ಕೇರಿದೆ.

ಕೇರಳದಲ್ಲಿ ಅಬ್ಬರ: ಕೇರಳದಲ್ಲಿ ಮಂಗಳವಾರ ಭಾರಿ ವರ್ಷಧಾರೆಯಾಗಿದ್ದು, ಕರಾವಳಿ ಪ್ರದೇಶಗಳು ತತ್ತರಗೊಂಡಿವೆ. ರಾಜ್ಯದಲ್ಲಿ ಇನ್ನೂ ಹೆಚ್ಚು ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಲಪು್ಪರಂ, ಕೋಜಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಉಳಿದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಎಲ್ಲೆಲ್ಲಿ ಹಾನಿ?

  • ಚಿಕ್ಕಬಳ್ಳಾಪುರ ಜಿಲ್ಲೆಯ ಚೀಡಚಿಕ್ಕನಹಳ್ಳಿಯಲ್ಲಿ ಹತ್ತಾರು ಎಕರೆ ದ್ರಾಕ್ಷಿ ಬೆಳೆ ನಾಶವಾಗಿದೆ
  • ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ದಡದ ರುದ್ರಭೂಮಿಯ 20ಕ್ಕೂ ಹೆಚ್ಚು ಸಮಾಧಿ ಕೊಚ್ಚಿಹೋಗಿವೆ
  • ದಾವಣಗೆರೆ ತಾಲೂಕಿನಲ್ಲಿ 205 ಎಕರೆ ಭತ್ತ, 3 ಎಕರೆ ಸಾಂಬಾರ ಸೌತೆ ಬೆಳೆ ಹಾನಿಯಾಗಿದೆ. ಬುಳ್ಳಾಪುರ ಗ್ರಾಮದಲ್ಲಿ ಒಂದು ಎತ್ತು ಸಿಡಿಲಿಗೆ ಬಲಿಯಾಗಿದೆ
  • ಹರಿಹರ ತಾಲೂಕಿನಲ್ಲಿ 285 ಎಕರೆ ಭತ್ತ, 1 ಎಕರೆ ಬಾಳೆ ಬೆಳೆ ಹಾನಿಯಾಗಿದೆ
  • ಚಿತ್ರದುರ್ಗ ಜಿಲ್ಲೆಯಲ್ಲಿ 33 ಮನೆ ಗಳಿಗೆ ಭಾಗಶಃ ಹಾನಿಯಾಗಿದೆ. ಮೊಳಕಾಲ್ಮೂ ರಲ್ಲಿ 154 ಕುರಿ ಮತ್ತು ಮೇಕೆಗಳು ಹಾಗೂ ಚಳ್ಳಕೆರೆ ಮತ್ತು ಮೊಳಕಾಲ್ಮೂರಲ್ಲಿ 3 ಹಸುಗಳು ಅಸುನೀಗಿವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net