

IMD Alert: ಕಳೆದ ಹಲವು ದಿನಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲಿ ವರುಣಾರ್ಭಟ ಜೋರಾಗಿದೆ. ಭಾರೀ ಮಳೆಗೆ ಕೆರೆ, ನದಿಗಳು ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ಭೂಕುಸಿತಗಳು ಸಂಭವಿಸಿವೆ. ಇತ್ತೀಚಿನ ವರದಿ ಪ್ರಕಾರ, ಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಬಿರುಸಿನ ಮಳೆ ಸುರಿಯಲಿದೆ.
ರಾಜ್ಯಾದ್ಯಂತ ನಿರಂತರ ಹಾಗೂ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐಎಂಡಿ ಪ್ರಕಾರ, ಹವಾಮಾನ ವೈಪರೀತ್ಯದ ಹಿನ್ನಲೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ನಿರೀಕ್ಷೆಗಿಂತ ಅಧಿಕ ವರುಣ ವ್ಯಾಪಿಸಲಿದೆ. ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ? ಯಾವ ಜಿಲ್ಲೆಗಳು ಈ ಪಟ್ಟಿಯಲ್ಲಿದೆ ಎಂಬುದರ ವಿವರ ಹೀಗಿದೆ ಗಮನಿಸಿ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಈ ರೀತಿಯ ಪರಿಸ್ಥಿತಿಗಳು ಮುಂದಿನ ಎರಡು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಎರಡು-ಮೂರು ದಿನಗಳ ಬಳಿಕ ಮಳೆ ಕಡಿಮೆಯಾದರೂ ಹಗುರ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ, ಬೆಳಗಾವಿ ಜಿಲ್ಲೆಯಲ್ಲಿ ಜು.4ರಂದು ಭಾರೀ ಮಳೆಯಾಗುವ ಮುನ್ಸೂಚನೆ ಲಭಿಸಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ. ಬೀಸಲಿದ್ದು, ಧಾರವಾಡದಲ್ಲಿಯೂ ಅಧಿಕ ಮಳೆ ಸುರಿಯುವ ನಿರೀಕ್ಷೆಯಿದೆ. ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಂತಹ ಇತರ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ವರದಿ ಹೇಳಿದೆ.
ದಕ್ಷಿಣ ಒಳನಾಡಿನಲ್ಲಿ ಇಂದು (ಜು.04) ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಜುಲೈ 7ರ ನಂತರ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿವೆ. ಆದಾಗ್ಯೂ ಕನಿಷ್ಠ ಜುಲೈ 9 ರವರೆಗೆ ಹಲವಾರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ,(ಏಜೆನ್ಸೀಸ್).