ರಾಗಿ ಕಟಾವು, ಒಕ್ಕಣೆಗೆ ಮಳೆ ಅಡ್ಡಿ

11-klr-1
Published on

ಕೋಲಾರ: ವಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ರಾಗಿ ಕಟಾವು, ಒಕ್ಕಣೆ ಕಾರ್ಯಕ್ಕೆ ಅಡ್ಡಿಯಾಗಿದ್ದು, ಕಾಳು ಗುಣಮಟ್ಟ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ. ಒಟ್ಟು 97,900 ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ 64567 ಹೆಕ್ಟೇರ್ ನಲ್ಲಿ ರಾಗಿ ಬೆಳೆ ಸಮೃದ್ಧವಾಗಿದೆ. ಆದರೆ ಈಗ ಕಟಾವಿನ ಸಮಯ. ಸಹಜವಾಗೇ ಕೂಲಿಯಾಳುಗಳ ಅಭಾವ, ಸಿಕ್ಕರೂ ಬೇಗ ಕೆಲಸ ಸಾಗದು, ಬೆಳಗಿನ ಕಾಫಿ, ತಿಂಡಿ, ಮಧ್ಯಾಹ್ನ ಊಟ, ಸಂಜೆ ಕಾಫಿ ಕೊಟ್ಟು ಕೂಲಿ 400-500 ರೂ. ನೀಡಬೇಕು.

ಬಹುತೇಕ ರೈತರು ತೆನೆ ಕಟಾವಿಗೆ ಒಪ್ಪಂದ ಕೊಡುತ್ತಿದ್ದು, ಎಕರೆಗೆ 12,000-15,000 ರೂ. ಇದೆ. ಸಣ್ಣ ಹಿಡುವಳಿದಾರರು ಮನೆಯವರೇ ಕಟಾವು ಮಾಡಿದರೆ, ಕೆಲವೆಡೆ ಸಹಕಾರದಡಿ ಅದಲು-ಬದಲು ವ್ಯವಸ್ಥೆ ಮಾಡಿಕೊಂಡು ಕಟಾವು ಮಾಡಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಯಂತ್ರದ ಸಹಾಯದಿಂದ ರಾಗಿ ತೆನೆ ಕಟಾವು ನಡೆಯುತ್ತಿದೆ. ತಾಲೂಕಿನ ಮದನಹಳ್ಳಿ, ಮೂರಂಡಹಳ್ಳಿ, ಸುಗಟೂರು ಇತರೆಡೆ ತೆನೆ ಕಟಾವು ಮಾಡುವ ಯಂತ್ರಗಳು ಬಂದಿವೆ. ಕಳೆದ ವರ್ಷ ಎಕರೆಗೆ 3500 ರೂ.

ಇತ್ತು. ಈ ವರ್ಷ 4000 ರೂ.ಗೆ ಏರಿಕೆಯಾಗಿದೆ. ಯಂತ್ರದಿಂದ ಕಟಾವು ಮಾಡಲು ಹೊಲ ಒಣಗಿರಬೇಕು, ತೆನೆ ನೆಲಕ್ಕೆ ಒರಗಿದ್ದರೆ ಕಟಾವು ಕಷ್ಟ. ಈ ವೇಳೆ ಒಂದೆರಡು ಕ್ವಿಂಟಾಲ್ ರಾಗಿ, ಹುಲ್ಲು ವ್ಯರ್ಥವಾಗುವುದರಿಂದ ಸಣ್ಣ ರೈತರು ಯಂತ್ರದ ಮೊರೆ ಹೋಗುವುದಿಲ್ಲ.

ಕಟಾವಿಗೆ ಅಡ್ಡಿ: ಜೂನ್-ಜುಲೈನಲ್ಲಿ ಬಿತ್ತನೆಯಾದ ರಾಗಿ ಕಟಾವಿಗೆ ಬಂದಿದ್ದು, ಎರಡು ವಾರಗಳಿಂದ ಈಚೆಗೆ ಅಲ್ಲಲ್ಲಿ ಕಟಾವು ನಡೆಯುತ್ತಿದೆ. ಆಗಸ್ಟ್‌ನಲ್ಲಿ ಬಿತ್ತನೆಯಾಗಿದ್ದ ರಾಗಿ ತೆನೆ ಕಟಾವಿಗೆ ಸಿದ್ಧವಾಗಿದೆ. ಈಗಾಗಲೆ ಕಟಾವು ಮಾಡಿರುವ ತೆನೆಯನ್ನು ಕಣಕ್ಕೆ ಹಾಕಿ ಕಾಳು ಬೇರ್ಪಡಿಸುವ ಕಾರ್ಯಕ್ಕೂ ತೊಂದರೆಯಾಗಿದೆ.

ಕಳೆದ ತಿಂಗಳು ಒಂದು ವಾರ ಸುರಿದ ಮಳೆಗೆ ಅನೇಕ ಹೊಲಗಳಲ್ಲಿ ತೆನೆಗಳು ಧರೆಗುರುಳಿದ್ದವು. ಅವುಗಳನ್ನು ಎತ್ತಿ ಕಟ್ಟಲಾಗಿತ್ತು. ಈಗ ಜಡಿ ಮಳೆಗೆ ಮತ್ತೆ ರಾಗಿ ತೆನೆ ನೆಲಕ್ಕೊರಗಿದ್ದು, ಕಟಾವು ಕಷ್ಟಕರವಾಗಿದ್ದರಿಂದ ತೆಗೆದುಕೊಳ್ಳುವವರು ಎಕರೆಗೆ ಕೂಲಿ

2000-3000 ರೂ. ಹೆಚ್ಚುವರಿ ಕೇಳುತ್ತಿದ್ದಾರೆ. ರಾಗಿ ಒಕ್ಕಣೆ ಕಣಗಳ ಸಂಖ್ಯೆ ತೀರಾ ಕಡಿಮೆ. ಬಹುತೇಕ ರೈತರು ಮನೆ ಆಸುಪಾಸು ಇರುವ ರಸ್ತೆ, ಕೆಲವರು ಬಂಡೆಗಳ ಮೇಲೆ ಒಕ್ಕಣೆ ಮಾಡುತ್ತಿದ್ದಾರೆ. ಈಗಾಗಲೆ ಕಟಾವು ಮಾಡಿರುವ ತೆನೆಗಳ ಒಕ್ಕಣೆಗೂ ಜಡಿಮಳೆ ಅಡ್ಡಿಯಾಗಿದ್ದು, ತೆನೆ ರಾಶಿ ಮಾಡಿ ಟಾರ್ಪಾಲ್ ಮುಚ್ಚಿ ಮಳೆಯಿಂದ ರಕ್ಷಣೆ ಒದಗಿಸಿದ್ದಾರೆ.

ಜಡಿಮಳೆ ಎರಡ್ಮೂರು ದಿನ ಮುಂದುವರಿದರೆ ತೇವಾಂಶಕ್ಕೆ ತೆನೆಯಲ್ಲೇ ಕಾಳು ಮೊಳಕೆ ಒಡೆಯುವ ಜತೆಗೆ ಗುಣಮಟ್ಟ ಕಳೆದುಕೊಳ್ಳುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವೋ ಎಂಬ ಆತಂಕದಲ್ಲಿದ್ದಾರೆ ರೈತರು. ತಡವಾಗಿ ಬಿತ್ತನೆಯಾದ ಕಡೆ ಕಟಾವಿಗೆ ಇನ್ನೂ 15 ದಿನ ಕಾಲಾವಕಾಶ ಇದೆ.

ತೊಗರಿಗೂ ಹಾನಿ: ಜಿಲ್ಲೆಯಲ್ಲಿ 4431 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದ್ದು, ಗಿಡಗಳು ಭರಪೂರ ಹೂವು ಬಿಟ್ಟಿವೆ. ಜಡಿ ಮಳೆಗೆ ಹೂವು ಹಾಳಾಗುತ್ತಿರುವುದರಿಂದ ಕಾಯಿ ಕಚ್ಚದೆ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.

ರಾಗಿ ತೆನೆ ಕಟಾವಿಗೆ ಸಿದ್ಧವಾಗಿದ್ದು, ಕೂಲಿಯಾಳುಗಳ ಅಭಾವದಿಂದ ಕಟಾವು ಮಾಡಲಾಗಿಲ್ಲ. ಜಡಿ ಮಳೆಗೆ ತೆನೆ ನೆಲಕ್ಕೊರಗಿದೆ. ಮಳೆ ನಿರಂತರವಾಗಿ ಬೀಳುತ್ತಿದ್ದರೆ ಕಟಾವು ಮಾಡಲು ಸಾಧ್ಯವಾಗದೆ ತೇವಾಂಶಕ್ಕೆ ಮೊಳಕೆಯೊಡೆಯುವ ಆತಂಕ ಇದೆ. ಟಿ.ಇ.ಮುನಿಶಾಮಪ್ಪ ತೊಟ್ಲಿ ರೈತ ಜಡಿ ಮಳೆಯಿಂದ ರಾಗಿ, ನೆಲಗಡಲೆ ಇನ್ನಿತರ ಬೆಳೆಗಳಿಗೆ ಹಾನಿಯಾಗಲಿದ್ದು, ಕಾಳುಗಳು ತೇವಾಂಶ ಹೀರಿಕೊಂಡು ಫಂಗಸ್ ಹಿಡಿದು ಗುಣಮಟ್ಟ ಕಳೆದುಕೊಳ್ಳುವ ಆತಂಕ ಇದೆ. ಅಕ್ಟೋಬರ್‌ನಲ್ಲಿ ರಾಗಿ, ನೆಲಗಡಲೆ ಇತರ ಬೆಳೆ ಸೇರಿ 178 ಹೆಕ್ಟೇರ್ ಬೆಳೆ ನಷ್ಟವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಡಿಮಳೆ ನಿಂತ ಮೇಲೆ ಮತ್ತೆ ಸರ್ವೇ ನಡೆಸಿ ನಷ್ಟದ ಬಗ್ಗೆ ವರದಿ ಸಲ್ಲಿಸಲಾಗುವುದು. ವಿ.ಡಿ.ರೂಪದೇವಿ ಜಂಟಿ ಕೃಷಿ ನಿರ್ದೇಶಕಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net