

ಲಖನೌ: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಜಿಲ್ಲೆಯ ಸೋನ್ಪಹಾಡಿ ಮತ್ತು ಹರ್ಡಿ ಎಂಬ ಎರಡು ಕಡೆ ಸುಮಾರು 3,350 ಟನ್ ಚಿನ್ನದ ನಿಕ್ಷೇಪವಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.
ಭಾರತ ಭೂಗರ್ಭ ಸರ್ವೆಕ್ಷಣೆ (ಜಿಎಸ್ಐ) ಮತ್ತು ಭೂಗರ್ಭ ಹಾಗೂ ಗಣಿ ನಿರ್ದೇಶನಾಲಯ ಸಮೀಕ್ಷೆ ನಡೆಸಿದ್ದವು. ರಾಜ್ಯದ ಗಣಿ ಇಲಾಖೆ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದು ಸಮಿತಿ ಸದಸ್ಯರು ನಿಕ್ಷೇಪವಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂದು ಜಿಲ್ಲಾ ಗಣಿ ಅಧಿಕಾರಿ ಕೆ.ಕೆ. ರಾಯ್ ತಿಳಿಸಿದ್ದಾರೆ. ಗಣಿಗಳು ಹೆಚ್ಚಾಗಿ ಬೆಟ್ಟ ಪ್ರದೇಶಗಳಲ್ಲಿ ಇರುವುದರಿಂದ ಗಣಿಗಾರಿಕೆ ನಡೆಸುವುದು ಸುಲಭ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಚಿನ್ನವಲ್ಲದೆ ಅಪರೂಪದ ಯುರೇನಿಯಂ ಖನಿಜ ದೊರಕುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಉತ್ತರ ಪ್ರದೇಶದ ಬುಂದೇಲ್ಖಂಡ ಮತ್ತು ವಿದ್ಯಾನಂದನ್ ಜಿಲ್ಲೆಗಳಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಗ್ರಾನೈಟ್, ಪಾಸ್ಪೇಟ್, ಕ್ವಾರ್ಟ್ಜ್ ಮತ್ತು ಚೈನಾ ಮಣ್ಣು ಹೇರಳವಾಗಿದೆ. ಅಪಾರ ಪ್ರಮಾಣ ಚಿನ್ನ ಹಾಗೂ ಇತರ ಖನಿಜಗಳ ನಿಕ್ಷೇಪ ಪತ್ತೆಯಾಗಿರುವುದರಿಂದ ರಾಜ್ಯದ ಆದಾಯಕ್ಕೆ ಉತ್ತಮ ಕೊಡುಗೆಯಾಗಲಿದೆ.