

ನವದೆಹಲಿ: ಕರೊನಾ ಆರ್ಭಟಕ್ಕೆ ಸಿಲುಕಿ ಜನತೆ ತತ್ತರಿಸುತ್ತಿರುವಾಗಲೇ ಉತ್ತರ ಭಾರತವನ್ನು ಆವರಿಸಿರುವ ಉಷ್ಣ ಮಾರುತ(ಬಿಸಿಗಾಳಿ) ಮತ್ತಷ್ಟು ಆತಂಕ ತಂದಿದೆ. ರಾಜಸ್ಥಾನ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಮಧ್ಯಪ್ರದೇಶದಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಸಮೀಪಕ್ಕೆ ಬಂದಿರುವಂತೆಯೇ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದಿರುವಂತೆ ಕರ್ನಾಟಕ ಹಾಗೂ ತೆಲಂಗಾಣಕ್ಕೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಮಂಗಳವಾರ 47.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ ದೆಹಲಿಯಲ್ಲಿ 44 ಡಿಗ್ರಿ, ಪಂಜಾಬ್ನಲ್ಲಿ 43, ಹರಿಯಾಣದಲ್ಲಿ 45, ಚಂಡೀಗಢದಲ್ಲಿ 42 ಹಾಗೂ ಮಧ್ಯಪ್ರದೇಶದಲ್ಲಿ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮೇ 28 ರವರೆಗೆ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಒಡಿಶಾ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಹಾಗೂ ಜಾರ್ಖಂಡ್ನಲ್ಲೂ ಇನ್ನೆರಡು ದಿನಗಳಲ್ಲಿ ಬಿಸಿಲ ಝುಳ ಹೆಚ್ಚಳವಾಗಬಹುದೆಂದು ಐಎಂಡಿ ಎಚ್ಚರಿಸಿದೆ. ತಾಪಮಾನ ಮಟ್ಟ ಅಧಿಕವಾಗಲಿರುವ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇದರ ವ್ಯಾಪ್ತಿಯಲ್ಲಿ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಚಂಡೀಗಢ ಇವೆ.
ಬಿಸಿಲಿಗೆ ರಾಜ್ಯ ತತ್ತರ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸೋಮವಾರ ಕಲಬುರಗಿಯಲ್ಲೇ ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಭಾನುವಾರ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ 45.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಕೆಲ ಜಿಲ್ಲೆಗಳಲ್ಲಿ ಬಿಸಿಗಾಳಿ ಆರ್ಭಟಿಸಿದ್ದರಿಂದ ಜನತೆ ಆತಂಕಕ್ಕೀಡಾಗಿದದರು. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲೂ ತಾಪಮಾನ 40-43 ಡಿಗ್ರಿ ಆಸುಪಾಸಿನಲ್ಲಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 36-38 ಡಿಗ್ರಿಯಷ್ಟಿದೆ. ಆದರೆ ದಕ್ಷಿಣ ಒಳನಾಡಿದನ ಕೆಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಬಿಸಿಲಿನ ಝುಳ ಅಷ್ಟಾಗಿ ಕಂಡುಬಂದಿಲ್ಲ.