ಸಿದ್ದರಾಮಯ್ಯ ಮಾತಿಗೆ ಸಿಡಿದೆದ್ದ ಸಿಎಂ ಫುಲ್​ ಗರಂ!

Yediyarappa 27 Sept 2o20
Published on

ಬೆಂಗಳೂರು: ವಿಧಾನಸಭೆಯಲ್ಲಿ ಶನಿವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಡಿದ ಮಾತಿನಿಂದ ಫುಲ್​ ಗರಂ ಆದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸಲು ಸಚಿವರು ಧಾವಿಸಿ ಬಂದ ಪ್ರಸಂಗ ನಡೆಯಿತು.

ಕಲಾಪ ಸಂದರ್ಭದಲ್ಲಿ ಅವಿಶ್ವಾಸ ಗೊತ್ತುವಳಿ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಮಾಡಿದರು. ಮಾತ್ರವಲ್ಲ ಈ ಎಲ್ಲದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ತೀವ್ರ ವಾಗ್ವಾದ ಏರ್ಪಟ್ಟು, ಸಿದ್ದರಾಮಯ್ಯ ವಿರುದ್ಧ ಸಿಎಂ ಏರುದನಿಯಲ್ಲಿ ಮಾತನಾಡುವಂತಾಯಿತು. ಸುಮ್ಮನೆ ಆರೋಪ ಮಾಡಬೇಡಿ, ನೀವು ಅದನ್ನು ಸಾಬೀತು ಮಾಡಿ, ಆಗ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಸಾಬೀತು ಮಾಡಲು ಆಗದಿದ್ದರೆ ನೀವು ರಾಜೀನಾಮೆ ನೀಡಿ. ನೀವು ಇಲ್ಲಿ ಸುಮ್ಮನೆ ಹೇಳಿದ್ದು ಓದಿದ್ದನ್ನೆಲ್ಲ ಒಪ್ಪಿಕೊಳ್ಳಬೇಕೇ? ಎಂದು ರೋಷಾವೇಶದಿಂದಲೇ ಸಿಎಂ ಪ್ರಶ್ನಿಸಿದರು.

ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತೆರಳುವ ಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಸಚಿವರಾದ ವಿ. ಸೋಮಣ್ಣ, ಸಿ.ಟಿ. ರವಿ ಅವರು ಸಿಎಂ ಆಸೀನರಾಗಿದ್ದ ಸ್ಥಳಕ್ಕೆ ಧಾವಿಸಿ ಸಮಾಧಾನ ಪಡಿಸಲು ಮುಂದಾದರು. ನಾವು ಮಾತನಾಡುತ್ತೇವೆ, ನೀವು ಸುಮ್ಮನಿರಿ ಎಂದು ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ನನಗೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ತಂದೆ ಸಮಾನರು. ಇಬ್ಬರೂ ಇತ್ತೀಚೆಗಷ್ಟೇ ಕೋವಿಡ್​ನಿಂದ ಚೇತರಿಸಿಕೊಂಡು ಗುಣವಾಗಿದ್ದಾರೆ. ಹೀಗಾಗಿ ಇಬ್ಬರೂ ಇಷ್ಟು ಜೋರಾಗಿ ಉಸಿರು ಕಟ್ಟುವ ರೀತಿಯಲ್ಲಿ ಮಾತನಾಡುವುದು ಒಳ್ಳೆಯದಲ್ಲ' ಎಂದು ಹಿತವಚನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net