

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಕಳೆದ ಎರಡು ತಿಂಗಳಿಂದಲೂ ತನ್ನ ಭೀಕರತೆ ತೋರಿಸುತ್ತಿದೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಭಯಾನಕತೆಯನ್ನು ಬಿಚ್ಚಿಡುವ, ಮನಕಲಕುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬೆಂಕಿಯ ಜ್ವಾಲೆಗೆ ಕೆಂಪಾದ ಆಗಸ, ಎಲ್ಲೆಲ್ಲೂ ತುಂಬಿರುವ ಹೊಗೆ, ಕಪ್ಪು ಬಣ್ಣಕ್ಕೆ ತಿರುಗಿದ ಅರಣ್ಯ, ಸಜೀವ ದಹನಗೊಂಡ ಪ್ರಾಣಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಅದರಲ್ಲೂ ಇಲ್ಲೊಂದು ಕಾಂಗರೂ ಮರಿಯು ಬೆಂಕಿಗೆ ಆಹುತಿಯಾದ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಹರಿದಾಡುತ್ತಿದೆ. ಪುಟ್ಟ ಕಾಂಗರೂ ಮರಿಯೊಂದು ಮುಳ್ಳುಬೇಲಿಯ ಮೇಲೆ ಕುಳಿತಿದ್ದಂತೆ ಸುಟ್ಟು ಹೋಗಿದೆ. ಈ ಫೋಟೋ ನೋಡಿದರೆ ಎಂತಹವರಿಗಾದರೂ ಒಮ್ಮೆ ಕಣ್ಣಲ್ಲಿ ನೀರು ಬಾರದೆ ಇರದು.
ಆಸ್ಟ್ರೇಲಿಯಾ ಕಾಡ್ಗಿಚ್ಚನ್ನು ನಿಯಂತ್ರಣ ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ, ಸೇನಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸಾಮಾನ್ಯ ಜನರೂ ಕೂಡ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಹಲವು ಪ್ರಾಣಿಗಳನ್ನು ಕಾಪಾಡಿ ಮಾನವೀಯತೆ ತೋರುತ್ತಿದ್ದಾರೆ.
ಬೆಂಕಿಯಲ್ಲಿ ಸಿಲುಕಿ ಒದ್ದಾಡುತ್ತಿರುವ, ಮೈಯನ್ನೆಲ್ಲ ಸುಟ್ಟುಕೊಂಡು ಕಂಗಾಲಾಗಿರುವ ಪುಟ್ಟಪುಟ್ಟ ಮರಿಗಳನ್ನು ರಕ್ಷಿಸಿ ಅವಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ.