ಫ್ರೆಂಡ್ಸ್​ ಜತೆ ನಡೆದು ಹೋಗುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು! ವಿಡಿಯೋ ನೋಡಿದ ನೆಟ್ಟಿಗರಲ್ಲಿ ಆತಂಕ

Young Man
Published on

ಲಖನೌ: ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವುದರಿಂದ ಕಳೆದ ಕೆಲ ದಿನಗಳಿಂದ ಟ್ವಿಟರ್​ನಲ್ಲಿ ಹಾರ್ಟ್​ ಅಟ್ಯಾಕ್ ಟ್ರೆಂಡಿಂಗ್​ನಲ್ಲಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಯುವಕನೊಬ್ಬ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಮೀರತ್​ನಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿ ಕ್ಯಾಮರೆಯಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ನಾಲ್ವರು ಯುವಕರು ರಾತ್ರಿ ಸಮಯದಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ನೋಡಲು ಆರೋಗ್ಯಯುತವಾಗಿ ಕಾಣುವ ಓರ್ವ ಯುವಕ ಮೊದಲು ಸೀನುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆತ ಎದೆ ನೋವಿನಿಂದ ಸ್ನೇಹಿತನ ಭುಜಕ್ಕೆ ಒರಗಿ, ನಿಲ್ಲಲಾಗದೇ ದಿಢೀರ್​ ಕುಸಿದು ಕೆಳಗೆ ಬೀಳುತ್ತಾನೆ. ಕ್ಷಣಾರ್ಧದಲ್ಲಿ ಇದಿಷ್ಟು ಘಟನೆ ನಡೆದು ಹೋಗುತ್ತದೆ. ಏನಾಯಿತು ಎಂದು ಸ್ನೇಹಿತರು ಗಾಬರಿಯಿಂದ ನೋಡುವಷ್ಟರಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.

ಈ ಘಟನೆ ಮೀರತ್​ನಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಕುಸಿದು ಬಿದ್ದ ಸ್ನೇಹಿತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಹೋಗಿತ್ತು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ರಸ್ತೆಯಲ್ಲಿರುವ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ. ಸಾವು ಯಾವಾಗ ಬೇಕಾದರೂ ಬರಬಹುದು. ಕುಳಿತು ಟಿವಿ ನೋಡುವಾಗ ನೀವು ಕುಸಿಯಬಹುದು. ನೃತ್ಯ ಮಾಡುವಾಗ ಕುಸಿದು ಸಾಯಬಹುದು. ಸ್ನೇಹಿತರೊಂದಿಗೆ ಚಾಟ್ ಮಾಡುವಾಗ ಸಾಯಬಹುದು ಎಂದು ವೀಡಿಯೋ ನೋಡಿದವರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net